ವೇಣುಪಾತ್ರೆಯಲ್ಲಿ ಶ್ರೀಗಳ ಪಾರ್ಥಿವ ಶರೀರ!

ಉಡುಪಿ, ಡಿ.29- ಮಾಧ್ವ ಸಂಪ್ರದಾಯ ಪ್ರಕಾರ, ಯತಿಗಳ ಪಾರ್ಥಿವ ಶರೀರವನ್ನು ಶಯನ (ಮಲಗಿಸುವುದು) ಸ್ಥಿತಿಯಲ್ಲಿ ಇರಿಸುವಂತಿಲ್ಲ. ಬೃಂದಾವನ ನಿರ್ಮಾಣದ ವೇಳೆ ಯತಿಗಳನ್ನು ಪೂಜಾ ಸ್ಥಿತಿಯಲ್ಲಿ ಕೂತಂತೆಯೇ ಮಣ್ಣು ಮಾಡಲಾಗುತ್ತದೆ. ಹೀಗಾಗಿ ಅಂತಿಮಯಾತ್ರೆಯ ವೇಳೆಯು ಅವರನ್ನು ಕುಳಿತ ಸ್ಥಿತಿಯಲ್ಲೇ ಇರಿಸಲಾಗುತ್ತದೆ. ಹೀಗೆ ಯತಿಗಳಿಗೆ ಅಂತಿಮ ಯಾತ್ರೆಯ ವೇಳೆ ಚಟ್ಟ ಬಳಸುವ ಪದ್ಧತಿ ಇಲ್ಲ. ಬದಲಾಗಿ ವೇಣು ಪಾತ್ರೆ (ಬುಟ್ಟಿ)ಯಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯುವುದು ವಾಡಿಕೆ. ಚಟ್ಟದಲ್ಲಿ ಸಾಮಾನ್ಯವಾಗಿ ಬಿದಿರು ಹಾಗೂ ಕಲ್ಪವೃಕ್ಷ್ಯದ ಗರಿಗಳನ್ನು ಬಳಸಲಾಗುತ್ತದೆ. ಇಲ್ಲಿ ಬಿದಿರನ್ನು ಬಳಸುವುದು, ವಂಶವೂ ಬಿದಿರಿನಂತೆ ವೃದ್ಧಿಯಾಗಲಿ ಎಂಬರ್ಥದಲ್ಲಿ ಬಳಸಲಾಗುತ್ತದೆಯಂತೆ. ಈ ಹಿನ್ನೆಲೆಯಲ್ಲಿ ಯತಿಗಳನ್ನು ಬೆತ್ತದ ಬುಟ್ಟಿಯಲ್ಲಿ ಕೊಂಡೊಯ್ಯಲಾಗುತ್ತದೆ ಎನ್ನುವ ಮಾತುಗಳು ಸಹ ಇದೆ. ಒಟ್ಟಾರೆ ಸಂಪ್ರದಾಯದ ಅಡಿಯಲ್ಲಷ್ಟೆ ಬುಟ್ಟಿಯಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಅಂತಿಮಯಾತ್ರೆಯಲ್ಲಿ ಸಾಗಿಸಲಾಗುತ್ತಿದೆ.