ಜನವರಿ 1ರಿಂದ ಕಂಡ ಕಂಡಲ್ಲಿ ಕಸ ಸುರಿಯುವವರಿಗೆ `ದಂಡ’ ಪ್ರಯೋಗ

ಮೈಸೂರು, ಡಿ.9(ಆರ್‍ಕೆ)-ಮೈಸೂರು ನಗರವನ್ನು ಸ್ವಚ್ಛವಾಗಿರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಾಲಿಕೆಯು, ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ `ಭಾರೀ ದಂಡ’ ಪ್ರಯೋಗದ ಎಚ್ಚರಿಕೆ ನೀಡಿದೆ.

2023ರ ಜನವರಿ 1 ರಿಂದ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ 2016ರ ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವ ವರಿಗೆ `ದಂಡ’ದ ಬರೆ ಹಾಕಲು ನಿರ್ಧರಿಸಿದೆ. ರಸ್ತೆ ಬದಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನದಲ್ಲಿ ಕಸ ಹಾಕುವುದು, ಕಂಡ ಕಂಡಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡಿದರೆ ಮೊದಲನೇ ಬಾರಿ 500 ರೂ., ಹಸಿ ಹಾಗೂ ಒಣ ಕಸ ಬೇರ್ಪಡಿಸದಿದ್ದಲ್ಲಿ ನಿವಾಸಿಗಳಿಗೆ ಮೊದಲನೇ ಬಾರಿ 200 ರೂ., ಪುನರಾವರ್ತನೆಗೆ 500 ರೂ., ವಾಣಿಜ್ಯ ಉದ್ದಿಮೆದಾರರಿಗೆ ಮೊದಲ ಬಾರಿ 500 ರೂ. ಹಾಗೂ ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲಾಗುವುದು.

ಕಲುಷಿತ ನೀರನ್ನು ರಸ್ತೆಗಳಲ್ಲಿ ಹರಿಯಬಿಟ್ಟರೆ ಮೊದಲ ಬಾರಿ 500 ರೂ. ಹಾಗೂ ಪುನರಾವರ್ತನೆಗೆ 1,000 ರೂ., ಪ್ರಾಣಿ ತ್ಯಾಜ್ಯವನ್ನು ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಮೊದಲ ಬಾರಿಗೆ 500 ರೂ., ಪುನರಾವರ್ತ ನೆಗೆ 1,000 ರೂ., ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದರೆ, ಚರಂಡಿಗಳಲ್ಲಿ ತ್ಯಾಜ್ಯ ಬಿಸಾಡಿದರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲಾಗುವುದು.

ತ್ಯಾಜ್ಯ ಸುಟ್ಟರೆ, ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ಮೊದಲ ಬಾರಿಗೆ 200 ರಿಂದ 1,000 ರೂ. ಹಾಗೂ ಪುನರಾವರ್ತನೆಗೆ 500 ರಿಂದ 5,000 ರೂ.ವರೆಗೆ, ಹಾಸ್ಟೆಲ್, ಹೋಟೆಲ್ ರೆಸ್ಟೋರೆಂಟ್, ವಿದ್ಯಾ ಸಂಸ್ಥೆ, ಕಲ್ಯಾಣ ಮಂಟಪ, ಮಾಲ್‍ಗಳು, ವಾಣಿಜ್ಯ ಕಟ್ಟಡ, ಸರ್ಕಾರಿ ಕಚೇರಿ, ವಸ್ತುಪ್ರದರ್ಶನ, ಕಾರ್ಯಕ್ರಮ ನಡೆಸುವವರು ಸರಿಯಾಗಿ ತ್ಯಾಜ್ಯ ನಿರ್ವಹಿಸದಿದ್ದರೆ ಮೊದಲ ಬಾರಿ 20,000 ರೂ. ಹಾಗೂ ಪುನರಾವರ್ತನೆಯಾದರೆ 50,000 ರೂ. ದಂಡ ತೆರಬೇಕಾಗುತ್ತದೆ. ಪ್ಲಾಸ್ಟಿಕ್ ಬಳಸುವ ಸಾರ್ವಜನಿಕರು, ಬೀದಿ ಬದಿ ವ್ಯಾಪಾರಿಗಳು, ವರ್ತಕರು, ಮಾರಾಟ ಮತ್ತು ವಿತರಣೆ ಮಾಡುವವರು, ದಾಸ್ತಾನು, ಸಾಗಣೆ, ತಯಾರಕರಿಗೆ ಮೊದಲ ಬಾರಿಗೆ 200 ರಿಂದ 1,00,000 ರೂ., ಪುನರಾವರ್ತನೆಗೆ 500 ರಿಂದ 2,00,000 ರೂ. ದಂಡ ವಿಧಿಸಲಾಗುವುದು ಎಂದಿರುವ ಮೇಯರ್ ಶಿವಕುಮಾರ್, ಪಾಲಿಕೆ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಜಾಹೀರಾತು ಫಲಕ ಅಳವಡಿಸುವವರಿಗೆ ಕರ್ನಾಟಕ ಓಪನ್ ಪ್ಲೇಸಸ್ ಪ್ರಿವೆನ್‍ಷನ್ ಆ್ಯಕ್ಟ್ 1981ರಂತೆ 10,000 ರೂ. ದಂಡ ವಿಧಿಸಲು ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ನುಡಿದರು. ಸಾರ್ವ ಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ತಂದು ಸುರಿಯುವವರನ್ನು ಕ್ಯಾಮರಾ ಫುಟೇಜ್‍ಗಳಿಂದ ಪತ್ತೆ ಮಾಡಿ ದಂಡ ವಸೂಲಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದ ಅವರು, ಸ್ವಚ್ಛ ಭಾರತ ಯೋಜನೆಯಡಿ ಸರ್ವೇಕ್ಷಣೆಯಲ್ಲಿ ಮೈಸೂರು ಪ್ರಥಮ ಸ್ವಚ್ಛ ನಗರಿ ಪುರಸ್ಕಾರ ಪಡೆಯಲು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.