ಪೆಟ್ರೋಲ್, ಡೀಸೆಲ್, ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಮೈಸೂರು, ಸೆ.7(ಆರ್‍ಕೆಬಿ)- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾಪಡೆ ಜಿಲ್ಲಾ ಘಟಕ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಲೆಗಳನ್ನು ಇಳಿಸಬೇಕು ಎಂದು ಆಗ್ರಹಿಸಿದರು.

`ಅಚ್ಛೇ ದಿನ್’ (ಒಳ್ಳೆಯ ದಿನಗಳು) ಬರುತ್ತವೆ ಎಂದು ಹೇಳುತ್ತಾ ಜನರನ್ನು ಕೇಂದ್ರ ಸರ್ಕಾರ ವಂಚಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ನಗರವಾಸಿ ಮಧ್ಯಮವರ್ಗದ ಜನರ ಬದುಕು ನರಕವಾಗಿದೆ. ವಿದ್ಯುತ್ ದರವೂ ಶೇ.30ರಷ್ಟು ಹೆಚ್ಚಾಗಿದೆ. ಇದು ಒಳ್ಳೆಯ ದಿನಗಳಾ? ಎಂದು ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ಪ್ರಶ್ನಿಸಿದರು. ಜಿಡಿಪಿ ವೃದ್ಧಿ ಬಗ್ಗೆ ಸಮರ್ಥಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪ್ರಕಾರ ಜಿಡಿಪಿ ಅಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಇರಬಹುದು. ಮೋದಿ ನಿಜವಾದ ದೇಶಪ್ರೇಮಿಯಾದರೆ, ಜನರ ಕಷ್ಟಗಳಿಗೆ ಸ್ಪಂದಿಸುವುದೇ ಆದರೆ ತಕ್ಷಣ ಪೆಟ್ರೋಲ್, ಡೀಸೆಲ್, ಗ್ಯಾಸ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಾಂತರಾಜೇಅರಸ್, ಮೊಗಣ್ಣಾಚಾರ್, ವಿಜಯೇಂದ್ರ, ಯೋಗೀಶ್, ಬಸವರಾಜು, ಚಂದ್ರ, ದರ್ಶನ್ ಗೌಡ, ರಾಮಣ್ಣ, ಮಿನಿ ಬಂಗಾರಪ್ಪ, ಗೊರೂರು ಮಲ್ಲೇಶ್, ಸುಂದರಪ್ಪ, ಮಂಜು ನಾಥ್, ಸ್ವಾಮಿ, ಕುಮಾರ್‍ಗೌಡ, ರವಿನಾಯಕ್, ನಂದಕುಮಾರ್ ಇದ್ದರು.