ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಸತತ ಏರಿಕೆ ಖಂಡಿಸಿ ಮೈಸೂರಿನ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ

ಮೈಸೂರು, ಜ.28(ಆರ್‍ಕೆಬಿ)- ದಿನೇ ದಿನೆ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರು ತ್ತಿದ್ದರೂ ಅದನ್ನು ನಿಯಂತ್ರಿಸದ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಮೈಸೂರು ಸಮಾನಮನಸ್ಕರ ವೇದಿಕೆ ಆಶ್ರಯದಲ್ಲಿ ಮೈಸೂರಿನ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಯಿತು. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ದಿನನಿತ್ಯದ ಪದಾರ್ಥಗಳ ಬೆಲೆ ಸತತವಾಗಿ ಏರುತ್ತಲೇ ಇದ್ದು, ಸಾಮಾನ್ಯ ಜನರು ಪರಿತಪಿಸು ವಂತಾಗಿದೆ. ಜನಪರ ಹೆಸರಿನಲ್ಲಿ ಅಧಿಕಾರಕ್ಕೇರಿದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ಕಾರ್ಯಕ್ರಮಗಳನ್ನೇ ನೀಡುತ್ತಿವೆ. ಸಾಮಾನ್ಯ ಜನರ ದಿನನಿತ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಜೊತೆಗೆ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಆರೋಪಿಸಿದರು.

ಸರ್ಕಾರ ದರ ಏರಿಕೆ ನಿಯಂತ್ರಣ ಮಾಡಬೇಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಗಳನ್ನು ಶೇ.50ರಷ್ಟು ಕಡಿಮೆ ಮಾಡಬೇಕು. ಜನರ ಬವಣೆ ತಪ್ಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕ ಒಂಟಿಕೊಪ್ಪಲ್ ಗುರುರಾಜ್, ಜೆ.ಯೋಗೇಶ್, ಸಿ.ರೇವಣ್ಣ, ವಿ.ಮಧು, ಎಂ.ಎಂ.ಎನ್.ಸ್ವರೂಪ್, ಎಸ್.ಆರ್.ರವಿ ಕುಮಾರ್, ಮಾದೇಶ್, ಎಸ್.ಶಿವಕುಮಾರ್‍ಗೌಡ, ಸಾ.ರಾ.ಅರುಣ್‍ಕುಮಾರ್, ಕ್ಯಾತಮಾರನಹಳ್ಳಿ ಆರ್.ಯೋಗೇಶ್, ವಸಂತಕುಮಾರ್ ಇನ್ನಿತರರು ಭಾಗವಹಿಸಿದ್ದರು.