ರಾಜ್ಯದ ಬಾಕಿ 14 ಲೋಕಸಭಾ ಕ್ಷೇತ್ರಗಳಲ್ಲಿಇಂದು ಮತದಾನ

ಬೆಂಗಳೂರು: ಜೋಳ ಹಾಗೂ ಸಕ್ಕರೆ ಕಣಜವಾಗಿರುವ ರಾಜ್ಯದ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಈಗಾಗಲೇ ಮೊದಲ ಹಂತದಲ್ಲಿ ಹಳೇ ಮೈಸೂರು ಮತ್ತು ಕರಾವಳಿ ತೀರದ 14 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ.

ಎರಡನೇ ಹಂತದಲ್ಲಿ ರಾಜ್ಯದ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ವಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಗಳಿಗೆ ನಾಳೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಎಂ. ಮಲ್ಲಿ ಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಅನಂತಕುಮಾರ ಹೆಗ್ಡೆ, ರಾಜ್ಯದ ಮಾಜಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ 237 ಘಟಾನುಘಟಿಗಳು ಕಣದಲ್ಲಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿ ಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ (ಶಿವಮೊಗ್ಗ),ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ಪುತ್ರ ಮಧುಬಂಗಾರಪ್ಪ (ಶಿವಮೊಗ್ಗ), ಹಾಲಿ ಸಂಸದ ರಾದ ಸುರೇಶ್ ಅಂಗಡಿ(ಬೆಳಗಾವಿ), ಪ್ರಕಾಶ್ ಹುಕ್ಕೇರಿ(ಚಿಕ್ಕೋಡಿ), ಪ್ರಹ್ಲಾದ್ ಜೋಷಿ(ಧಾರವಾಡ), ವಿ.ಎಸ್.ಉಗ್ರಪ್ಪ (ಬಳ್ಳಾರಿ), ಪಿ.ಸಿ.ಗದ್ದಿ ಗೌಡರ್(ಬಾಗಲಕೋಟೆ), ಜಿ.ಎಂ.ಸಿದ್ದೇಶ್ವರ್ ಹುರಿಯಾಳು ಗಳಾಗಿದ್ದಾರೆ. ಶಿವಮೊಗ್ಗ ಹಾಗೂ ದಾವಣಗೆರೆ ಹೊರತು ಪಡಿಸಿದರೆ ಉಳಿದ 12 ಕ್ಷೇತ್ರಗಳು ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿರುವುದರಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಈ ಚುನಾವಣೆಯಲ್ಲಿ ಯಡಿಯೂ ರಪ್ಪ ಶಿವ ಮೊಗ್ಗದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸ ಬೇಕಾದ ಸಂದಿಗ್ಧತೆಗೆ ಸಿಲುಕಿದ್ದರೆ ಅತ್ತ ಕಲಬುರಗಿ ಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಹಿಂದೆಂದೂ ಕಾಣದ ಸ್ಪರ್ಧೆ ಎದುರಾಗಿದೆ. ಬಿಜೆಪಿಯಿಂದ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿ ಸಿದೆ. ಗಣಿ ಜಿಲ್ಲೆ ಬಳ್ಳಾರಿಯಲ್ಲಿ ವಿ.ಎಸ್.ಉಗ್ರಪ್ಪ, ಬಿಜೆಪಿಯ ದೇವೇಂದ್ರಪ್ಪ ಪ್ರಬಲ ಪೈಪೆÇೀಟಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಈ ಬಾರಿ ಪ್ರತಿ ಸ್ಪರ್ಧೆಯೊಡ್ಡಿದ್ದಾರೆ. ಧಾರವಾಡದಲ್ಲಿ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ರುವ ಪ್ರಹ್ಲಾದ್ ಜೋಷಿಗೆ ಮಾಜಿ ಸಚಿವ ವಿನಯ್‍ಕುಲಕರ್ಣಿ, ಬೆಳಗಾವಿಯಲ್ಲಿ ಸುರೇಶ್ ಅಂಗಡಿಗೆ ಕಾಂಗ್ರೆಸ್‍ನ ಸಾಧುನವರ, ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿಗೆ ಅಣ್ಣಾ ಜೊಲ್ಲೆ, ಬಾಗಲ ಕೋಟೆಯಲ್ಲಿ ಗದ್ದಿಗೌಡರಿಗೆ ವೀಣಾ ಕಾಶಪ್ಪನವರ್, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ್‍ಗೆ ಕಾಂಗ್ರೆಸ್‍ನ ಎಚ್.ಬಿ.ಮಂಜಪ್ಪ ಸೇರಿದಂತೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ದೋಸ್ತಿ ಮತ್ತು ಬಿಜೆಪಿ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ.

14 ಕ್ಷೇತ್ರಗಳಲ್ಲಿ ಒಟ್ಟು 2,43,03,279 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ. ಕಳೆದ 18ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.68ರಷ್ಟು ಮತದಾನವಾಗಿತ್ತು. ನಾಳೆ ಹೆಚ್ಚಿನ ಪ್ರಮಾಣ ದಲ್ಲಿ ಮತದಾನವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಚುನಾವಣೆ ನಿರ್ವಹಣೆಗೆ 2.03 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 2,174 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. 1,478 ಬೂತ್‍ಗಳಲ್ಲಿ ವಿಡಿಯೋಗ್ರಾಫರ್‍ಗಳನ್ನು ಹಾಗೂ 1,479 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.