ಪಿಪಿಇ ಕಿಟ್ ಸಿದ್ಧಪಡಿಸಿದ ಸಿಪೆಟ್‍ಗೆ ಕೇಂದ್ರ  ಸಚಿವ ಡಿ.ವಿ.ಸದಾನಂದಗೌಡರ ಪ್ರಶಂಸೆ

ನವದೆಹಲಿ, ಜು.23- ಕೇಂದ್ರ ರಾಸಾಯನಿಕ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಗೆ ಪಿಪಿಇ ಕಿಟ್ ಮತ್ತು ಪ್ರಮಾಣೀಕರಣಕ್ಕೆ ರಾಷ್ಟ್ರೀಯ ಪರೀಕ್ಷಾ ಮತ್ತು ಪ್ರಮಾಣೀಕರಣ ಮಂಡಳಿ (ಎನ್‍ಎಬಿಎಲ್)ಯಿಂದ ಮಾನ್ಯತೆ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ನಿರ್ಮಾಣದ ಕನಸು ನನಸಾಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಸಾಧನೆ ಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಪ್ರಶಂಸಿಸಿದ್ದಾರೆ.

ಸಿಪೆಟ್‍ನ ಭುವನೇಶ್ವರದ ಐಪಿಟಿ ಕೇಂದ್ರ, ಪಿಪಿಇ ಕಿಟ್ ಪರೀಕ್ಷಾ ಸೌಕರ್ಯವನ್ನು ಅಭಿವೃದ್ಧಿಪಡಿಸಿ, ಮಾನ್ಯತೆಗಾಗಿ ಎನ್‍ಎಬಿಎಲ್‍ಗೆ  ಅರ್ಜಿ ಸಲ್ಲಿಸಿತ್ತು. ಎನ್‍ಎಬಿಎಲ್ ಆನ್‍ಲೈನ್ ಮೂಲಕ ಪರೀಕ್ಷಾ ಸೌಕರ್ಯದ ಆಡಿಟ್ ಮಾಡಿ, ಮಾನ್ಯತೆಯನ್ನು ಅನುಮೋದಿಸಿದೆ. ಇನ್ನೂ ಕೆಲವು ಸಿಪೆಟ್ ಘಟಕಗಳು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆ ಪ್ರಗತಿಯಲ್ಲಿದೆ. ಈ ಪಿಪಿಇ ಕಿಟ್‍ನಲ್ಲಿ ಗ್ಲೌಸ್, ಸಂಪೂರ್ಣ ದೇಹ ರಕ್ಷಾ ಕವಚ, ಮುಖ ರಕ್ಷಾ ಕವಚ, ಕನ್ನಡಕ ಹಾಗೂ ಮೂರು ಪದರದ ಮಾಸ್ಕ್ ಮತ್ತಿತರ ಸಾಧನಗಳು ಸೇರಿದ್ದು, ಇವುಗಳನ್ನು ಅಂತಾ ರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಈ ಸಾಧನೆಯಿಂದಾಗಿ ದೇಶದ ಎಲ್ಲ ಜನರಿಗೂ ಅನುಕೂಲವಾಗಲಿದೆ. ಅಲ್ಲದೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಂಎಸ್‍ಎಂಇಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಹಾಯಕ ವಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಎಸ್‍ಒ ಮಾರ್ಗಸೂಚಿಯಂತೆ ಆರೋಗ್ಯ ರಕ್ಷಣಾ ವಲಯದಲ್ಲಿ ಹಲವು ಸಂಶೋಧನಾ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಸಿಪೆಟ್ ಕೈಗೆತ್ತಿಕೊಂಡಿದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿÀ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಆಹಾರ ಧಾನ್ಯ ಮತ್ತು ರಸಗೊಬ್ಬರ ಪ್ಯಾಕೇಜಿಂಗ್ ಹಾಗೂ ಇತರೆ ಅಗತ್ಯ ಸೇವೆಗಳಿಗೂ ವಿಸ್ತರಿಸಿ, ಬೆಂಬಲ ನೀಡಿದೆ ಎಂದು ಡಿ.ವಿ.ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.