ಕೋವಿಡ್ ಸೆಂಟರ್‍ಗೆ ಸಿದ್ಧತೆ: ಡಿಸಿ ಸ್ಥಳ ಪರಿಶೀಲನೆ

ಚಾಮರಾಜನಗರ, ಏ.30- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಚಾಮರಾಜನಗರ ತಾಲೂಕಿನ ಮಲ್ಲಯ್ಯನ ಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಕೇಂದ್ರ ಆರಂಭಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಪರಿಶೀಲಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಹಾಸಿಗೆ ಸೌಲಭ್ಯ ಒದಗಿಸ ಬಹುದಾದ ಕೋವಿಡ್ ಕೇರ್ ಸೆಂಟರ್‍ಗಾಗಿ ಅಗತ್ಯ ಸಿದ್ಧತೆ ಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಕೇರ್ ಆರಂಭಿಸಲು ಅಗತ್ಯವಿರುವ ಎಲ್ಲಾ ಸೌಕರ್ಯ ಗಳನ್ನು ಒಳಗೊಂಡಂತೆ ಸಿದ್ದಪಡಿಸಬೇಕು. ಹಾಸಿಗೆಗಳು, ಹೊದಿಕೆ, ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು. ಕುಡಿಯುವ ನೀರು, ವಿದ್ಯುತ್ ಸರಬರಾಜು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಡಿಸಿ ತಿಳಿಸಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ವಿಶೇಷ ಗಮನ ನೀಡಬೇಕು. ಸೋಂಕಿತರಿಗೆ ಆಹಾರ ವನ್ನು ನಿಗದಿಪಡಿಸಲಾಗಿರುವ ಮೆನು ಪ್ರಕಾರವೇ ನೀಡಬೇಕು. ಗುಣಮಟ್ಟ, ಪ್ರಮಾಣ ಹಾಗೂ ಶುಚಿತ್ವದಲ್ಲಿ ಯಾವುದೇ ಕೊರತೆ ಯಾಗಬಾರದು ಎಂದು ಸೂಚನೆ ನೀಡಿದರು. ಕಟ್ಟಡದ ಮುಂಭಾ ಗದ ರಸ್ತೆಯನ್ನು ಕೂಡಲೇ ಸರಿಪಡಿಸಿ ಸಂಚಾರಕ್ಕೆ ತೊಂದರೆ ಯಾಗದ ಹಾಗೆ ಸಿದ್ದಪಡಿಸಬೇಕು. ತುರ್ತಾಗಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಪೂರೈಸಿ ಕೋವಿಡ್ ಕೇರ್ ಕೇಂದ್ರವನ್ನು ಬಳಕೆ ಮಾಡಲು ಸಜ್ಜುಗೊಳಿಸುವಂತೆ ಡಿಸಿ ಡಾ.ಎಂ.ಆರ್.ರವಿ ನಿರ್ದೇಶನ ನೀಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾ ಧಿಕಾರಿ ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾಗೀರಥಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಇನ್ನಿತರರು ಹಾಜರಿದ್ದರು.