ಕಾರಿಗೆ ಖಾಸಗಿ ಬಸ್ ಡಿಕ್ಕಿ:ಯುವ ಉದ್ಯಮಿ ಸಾವು

ಮೈಸೂರು, ಅ. 17(ಆರ್‍ಕೆ)- ಮೈಸೂರು-ತಿ.ನರಸೀಪುರ ನಡುವೆ ವರಕೋಡು ಗೇಟ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿ ಸಿದ ಭೀಕರ ರಸ್ತೆ ಅಪಘಾತದಲ್ಲಿ ಪೌಲ್ಟ್ರಿ ಫಾರಂ ನಿರ್ವಹಿಸುತ್ತಿದ್ದ ಯುವ ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೈಸೂರಿನ ಕೆಸಿ ಬಡಾವಣೆ ನಿವಾಸಿ ಎಂ.ಪಿ. ನಾರಾಯಣ ಅವರ ಏಕೈಕ ಪುತ್ರ ಸಾಗರ್(34) ದುರಂತದಲ್ಲಿ ಸಾವ ನ್ನಪ್ಪಿದವರಾಗಿದ್ದು, ಇವರು ಚಾಲನೆ ಮಾಡುತ್ತಿದ್ದ ಸ್ಕೋಡಾ ಕಾರಿಗೆ ಸಚಿನ್ ಟ್ರಾವೆಲ್ಸ್‍ನ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಸಾಗರ್ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಪಿಲ್ಲಹಳ್ಳಿ ಬಳಿಯ ತಮ್ಮ ಪೌಲ್ಟ್ರಿ ಫಾರಂಗೆ ಹೋಗಿ, ಸ್ಕೋಡಾ ಕಾರಿನಲ್ಲಿ (ಕೆಎ 09-ಎನ್ 6067) ಹಿಂದಿರುಗುತ್ತಿದ್ದಾಗ ಮೈಸೂರಿನಿಂದ ತಿ.ನರಸೀಪುರ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸು ಮಧ್ಯಾಹ್ನ 1.30ರ ಸುಮಾರಿನಲ್ಲಿ ವರಕೋಡು ಗೇಟ್ ಬಳಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದನ್ನು ಚಾಲನೆ ಮಾಡುತ್ತಿದ್ದ ಸಾಗರ್ ಸಾವನ್ನಪ್ಪಿದ್ದಾರೆ. ಸಾಗರ್ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ತಿ.ನರಸೀಪುರ ರಸ್ತೆಯ ಪಿಲ್ಲಳ್ಳಿ ಬಳಿ ಪೌಲ್ಟ್ರಿ ಪಾರಂ ಮಾಡಿದ್ದ ಅವರು, ಕೋಳಿ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಕೋಳಿ ಫಾರಂ ಬಳಿ ಹೋಗಿ ನೋಡಿಕೊಂಡು ಕೆಲಸಗಾರರನ್ನೆಲ್ಲಾ ಮಾತನಾಡಿಸಿ, ಮಧ್ಯಾಹ್ನದ ಊಟಕ್ಕೆ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವರುಣಾ ಠಾಣೆ ಇನ್ಸ್‍ಪೆಕ್ಟರ್ ಸ್ವರ್ಣ ಹಾಗೂ ಸಿಬ್ಬಂದಿ, ಕಾರಿನಲ್ಲಿ ಸಿಲುಕಿದ್ದ ಸಾಗರ್ ದೇಹವನ್ನು ಹೊರತೆಗೆದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿದರು. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು, ಕಾರು ಮತ್ತು ಖಾಸಗಿ ಬಸ್ಸನ್ನು ವಶಕ್ಕೆ ಪಡೆದು ಅಪಘಾತ ನಂತರ ಪರಾರಿಯಾಗಿರುವ ಬಸ್ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ. ಮೈಸೂರು ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಮೃತಪಟ್ಟ ಸಾಗರ್ ಅವರು ತಂದೆ ನಾರಾಯಣ್, ತಾಯಿ ಸುನೀತಾ, ಪತ್ನಿ, ಸಹೋದರಿ ಸುಷ್ಮಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಸಹೋದರಿ ಅಮೆರಿಕಾದಲ್ಲಿರುವುದರಿಂದ ಅವರು ಮೈಸೂರಿಗೆ ಆಗಮಿಸಿದ ನಂತರ ಬುಧವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.