ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿರುವಾಗ ಪಕ್ಷಕ್ಕೆ ಹೆಚ್ಚಿನ ಬಲ ತುಂಬುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕಾಂಗ್ರೆಸ್, ನೆಹರು ಕುಟುಂಬದ ಇನ್ನೊಂದು ಕುಡಿಯನ್ನೂ ಸಕ್ರಿಯ ರಾಜಕಾರಣಕ್ಕೆ ಸೆಳೆದಿದೆ.

ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದಂಪತಿ ಪುತ್ರಿ, ಇಂದಿರಾ ಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ( 47 ವರ್ಷ) ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಲಾಗಿದೆ.

ಇದರೊಂದಿಗೆ ಉತ್ತರ ಪ್ರದೇಶದ ಪೂರ್ವ ಪ್ರಾಂತ್ಯ ಹೊಣೆಗಾರಿಕೆಯನ್ನು ಪ್ರಿಯಾಂಕಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಹಿಸಿ ಬುಧ ವಾರ ಮಧ್ಯಾಹ್ನ ಪ್ರಕಟಣೆ ಹೊರಡಿಸಿದ್ದಾರೆ. ಫೆಬ್ರವರಿ ಮೊದಲ ವಾರ ಪ್ರಿಯಾಂಕಾ ವಾದ್ರಾ ಅವರು ಪಕ್ಷದ ಹೊಸ ಹೊಣೆಗಾರಿಕೆ ವಹಿಸಿ ಕೊಳ್ಳಲಿದ್ದಾರೆ. ಪ್ರಿಯಾಂಕಾ ಅವರ ರಾಜಕಾರಣ ಮತ್ತು ಚುನಾವಣಾ ಪ್ರಚಾರ, ಈವರೆಗೆ ಪಕ್ಷದ ರಾಜಕೀಯ ಭದ್ರಕೋಟೆ ಸಹೋದರ ಹಾಗೂ ತಾಯಿ ಪ್ರತಿನಿಧಿಸುವ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್‍ಬರೇಲಿ ಕ್ಷೇತ್ರಗಳಿಗೆ ಮಾತ್ರ ಸೀಮಿತ ವಾಗಿತ್ತು. ಇದೇ ಮೊದಲ ಬಾರಿಗೆ ಅವರನು ಸಂಘಟನಾತ್ಮಕ ಹುದ್ದೆಗೆ ನಿಯೋಜಿಸಿ ಸಕ್ರಿಯ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂಘಟನಾತ್ಮಕ ಶಕ್ತಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್‍ನಿಂದ ಇದೊಂದು `ಮಾಸ್ಟರ್ ಸ್ಟ್ರೋಕ್’ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಈ ಮಧ್ಯೆ ಪ್ರಿಯಾಂಕಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೊದಿ ವಿರುದ್ಧ ವಾರಣಾಸಿ ಯಲ್ಲಿ ಅಬ್ಬರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯ ಅನುಭವ: ಈಗಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಗಾಂಧಿ ಅವರಿಗೆ ಸಾಕಷ್ಟು ರಾಜಕೀಯ ಅನುಭವವಿದೆ ಎಂಬ ಮಾತುಗಳನ್ನು ಪಕ್ಷದ ಹಿರಿಯರೇ ಹೇಳುತ್ತಿದ್ದಾರೆ. ಪ್ರಿಯಾಂಕ ಅವರು ತಾಯಿ ಸೋನಿಯಾ, ಸೋದರ ರಾಹುಲ್ ಚುನಾವಣೆಗೆ ಸ್ಪರ್ಧಿಸಿದ್ದಾಗಲೆಲ್ಲಾ ಅವರ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದರು. ಅಲ್ಲದೇ, ಕೆಲವು ಸಂದಿಗ್ಧ ಸಂದರ್ಭಗಳಲ್ಲಿ ತಾಯಿ ಮತ್ತು ಸೋದರ ರಾಜಕೀಯವಾಗಿ ಸಮರ್ಪಕ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಪ್ರಿಯಾಂಕ ವಾದ್ರಾ ನೆರವಾಗುತ್ತಿದ್ದರು. ಇತ್ತೀಚೆಗೆ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಬಹಳ ಗೊಂದಲ ಸೃಷ್ಟಿಯಾಗಿದ್ದಾಗಲೂ ಪ್ರಿಯಾಂಕ ಅವರು ಸಲಹೆಗಳನ್ನು ನೀಡಿದ್ದರು. ಅತೃಪ್ತಿ ಮೂಡದಂತೆಯೂ ಸಂದರ್ಭವನ್ನು ನಿಭಾಯಿಸಲು ಸೋದರನ ಜೊತೆಗೆ ಇದ್ದರು ಎಂಬ ಮಾತುಗಳನ್ನು ಪಕ್ಷದ ನಾಯಕರು ನೆನಪಿಸಿಕೊಂಡಿದ್ದಾರೆ.