ಉತ್ಪಾದನೆ ಆಧರಿಸಿ ಬೋನಸ್: ರೈಲ್ವೆ ನೌಕರರ ಆಗ್ರಹ-ಪ್ರತಿಭಟನೆ

ಮೈಸೂರು,ಅ.20(ಪಿಎಂ)-ಉತ್ಪಾದನೆ ಆಧರಿಸಿ ಬೋನಸ್ ಪಾವತಿ ಮಾಡುವಂತೆ ಒತ್ತಾಯಿಸಿ ಭಾರತೀಯ ರೈಲ್ವೆ ನೌಕರರು ಮೈಸೂರಿನ ವಿಭಾಗೀಯ ವ್ಯವಸ್ಥಾಪಕರ ಕಚೇರಿ ಎದುರಿನಲ್ಲಿರುವ ಯೂನಿಯನ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯನ್ ರೈಲ್ವೆ ಮೆನ್ಸ್ ಫೆಡರೇಷನ್ (ಎಐಆರ್‍ಎಫ್) ಕರೆ ಮೇರೆಗೆ ಇಂದು ದೇಶಾದ್ಯಂತ ರೈಲ್ವೆ ನೌಕರರು ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲೂ ಸೌತ್ ವೆಸ್ಟ್ರನ್ ರೈಲ್ವೆ ಮಜ್ದೂರ್ ಯೂನಿಯನ್‍ನ ಮೈಸೂರು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ರೈಲ್ವೆ ನೌಕರರಿಗೆ ಬೋಸನ್ ಎಂಬುದು ಭಾವನಾತ್ಮಕ ವಿಚಾರ. ಇದೇ ವಿಚಾರವಾಗಿ ಎಐಆರ್‍ಎಫ್ ಹಾಗೂ ವಿವಿಧ ಯೂನಿಯನ್‍ಗಳು 1974ರಲ್ಲಿ ಅರ್ನಿದಿಷ್ಟಾವಧಿ ಮುಷ್ಕರ ಹೂಡಿದ್ದವು. ಆ ಹೋರಾಟದ ಫಲವಾಗಿ 1979ರಿಂದ ಈವರೆಗೂ ರೈಲ್ವೆ ನೌಕರರಿಗೆ ಬೋನಸ್ ಪಾವತಿ ಆಗುತ್ತ ಬಂದಿದೆ. ದಸರಾ ಹಬ್ಬಕ್ಕೆ ಮುನ್ನ ಕೊಡುತ್ತಿದ್ದ ಬೋನಸ್ ಈ ಬಾರಿ ಇನ್ನೂ ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು. ಕೂಡಲೇ ಬೋನಸ್ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಅಧ್ಯಕ್ಷ ಎಸ್.ಸೋಮಶೇಖರ್, ಕಾರ್ಯದರ್ಶಿ ಪಿ.ಶಿವಪ್ರಕಾಶ್, ಕಾರ್ಮಿಕ ಮುಖಂಡ ರಾದ ಶಿವಕುಮಾರ್, ಎ.ಎಂ.ಡಿ’ಕ್ರೂಜ್ ಸೇರಿದಂತೆ ಕಾರ್ಮಿಕರು ಪಾಲ್ಗೊಂಡಿದ್ದರು.