ಪ್ರೊ. ಮಹೇಶ್‍ಚಂದ್ರಗುರು, ಪ್ರೊ. ಅರವಿಂದ ಮಾಲಗತ್ತಿ ಯಾವ ಪಕ್ಷದ ಪರವೂ ಪ್ರಚಾರ ನಡೆಸಿಲ್ಲ ಅಮಾನತು ಆದೇಶ ಹಿಂತೆಗೆದುಕೊಳ್ಳದಿದ್ದರೆ ಹೋರಾಟ: ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ

ಮೈಸೂರು, ಏ.26(ಆರ್‍ಕೆಬಿ)- ಮೈಸೂರು ವಿವಿ ಪತ್ರಿಕೋದ್ಯಮ ವಿಭಾ ಗದ ಪ್ರಾಧ್ಯಾಪಕ ಪ್ರೊ.ಮಹೇಶ್‍ಚಂದ್ರಗುರು ಮತ್ತು ಪ್ರೊ.ಅರವಿಂದ ಮಾಲಗತ್ತಿ ಅವರನ್ನು ವಜಾಗೊಳಿಸುವ ಮೊದಲು ತನಿಖೆÉ, ಸಿಂಡಿಕೇಟ್‍ನಲ್ಲಿ ವಿಷಯ ಮಂಡನೆ ಮುಂತಾದ ಕಾನೂನುಬದ್ಧ ನಿಯಮಗಳನ್ನು ಅನುಸರಿಸದೇ ಏಕಪಕ್ಷೀಯವಾಗಿ ಅಮಾ ನತುಗೊಳಿಸಿರುವುದು ಕಾನೂನು ಬಾಹಿರ ಕ್ರಮವಾಗಿದ್ದು, ಕೂಡಲೇ ಅಮಾನತು ಹಿಂಪಡೆಯಬೇಕು ಎಂದು ವಿಧಾನ ಪರಿ ಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೊ.ಮಹೇಶ್‍ಚಂದ್ರಗುರು, ಪ್ರೊ.ಅರವಿಂದ ಮಾಲಗತ್ತಿ, ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿಲ್ಲ. ಇದು ಸತ್ಯಕ್ಕೆ ದೂರವಾದದ್ದು. ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಮೇಲೆ ಸುಳ್ಳು ಆರೋಪ ಮಾಡಿ, ಅಮಾ ನತು ಮಾಡಿರುವುದು ಖಂಡನೀಯ ಎಂದರು. ಅವರು ಯಾವುದೇ ಪಕ್ಷದ ಪರ ಪ್ರಚಾರ ನಡೆಸಿಲ್ಲ. ಈ ಸಂಬಂಧ ವೀಡಿಯೋ ಮತ್ತು ಚಿತ್ರಗಳು ಸಾಕ್ಷಿಯಾ ಗಿದ್ದು, ಅದನ್ನು ಪರಿಶೀಲಿಸಿಲ್ಲ. ಸಿಂಡಿ ಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಬೇಕಿತ್ತು. ಅದು ಬಿಟ್ಟು, ಬಿಜೆಪಿ ಪಕ್ಷದ ಒತ್ತಡಕ್ಕೆ ಒಳಗಾಗಿ ವಿವಿ ಕುಲಪತಿ ಮತ್ತು ಕುಲಸಚಿವರು ಯಾವುದೇ ಸ್ಪಷ್ಟನೆಯನ್ನೂ ಕೇಳದೆ ಏಕಾಏಕಿ ಅಮಾನತು ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಆರೋ ಪಿಸಿದರು. ತಕ್ಷಣ ಅಮಾನತು ವಾಪಸ್ ಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸದಿದ್ದರೆ ಪ್ರತಿಭಟನೆ ನಡೆಸಲಾ ಗುವುದು. ಕುಲಪತಿಗಳ ಈ ಕ್ರಮವನ್ನು ಪ್ರಶ್ನಿಸಿ ಉನ್ನತ ಶಿಕ್ಷಣ ಸಚಿವಾಲಯದಲ್ಲಿ ದೂರು ದಾಖಲಿಸಲಾಗುವುದು ಎಂದ ಅವರು, ಈ ವಿಚಾರದಲ್ಲಿ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಪ್ರಗತಿಪರ ಚಿಂತಕರ ವೇದಿಕೆಯ ಬೆಂಬಲಿ ಗರಾದ ಡಾ.ಮಧು, ಸಂಪತ್ತು, ಮಾದೇವು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದಲಿತ ಪ್ರಜ್ಞೆಯ ಪ್ರತಿಭೆಗಳನ್ನು ತುಳಿ ಯುವ ಹುನ್ನಾರ: ಇನ್ನೊಂದು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಯಾವುದೇ ಪಕ್ಷದ ಪರ ಪ್ರಚಾರ ಮಾಡಿಲ್ಲದ ಪ್ರೊ. ಮಹೇಶ್ ಚಂದ್ರಗುರು ಮತ್ತು ಪ್ರೊ.ಅರವಿಂದ ಮಾಲಗತ್ತಿ ವಿರುದ್ಧ ಅಮಾನತು ಕ್ರಮ ಕೈಗೊಂಡಿರುವುದನ್ನು ಖಂಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಂವಿಧಾನ ಉಳಿಸಿ, ಕೋಮುವಾದ ಅಳಿಸಿ ಎಂಬ ಜನರಾಜಕಾರಣ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಯಾವುದೇ ಪಕ್ಷದ ಪರ ಮತ ನೀಡುವಂತೆ ಅವರು ಕೋರಿಲ್ಲ. ಹೀಗಿರುವಾಗ ಅವರ ವಿರುದ್ಧ ಕ್ರಮ ಸರಿಯಲ್ಲ ಎಂದು ದೂರಿದರು. ಈ ಕ್ರಮ ದಲಿತ ಪ್ರಜ್ಞೆಯ ಪ್ರತಿಭೆಗಳನ್ನು ತುಳಿಯುವ ಹುನ್ನಾರವಾಗಿರುವುದರ ಜೊತೆಗೆ ಮೈಸೂರು ವಿವಿ ಘನತೆಗೂ ಕಪ್ಪು ಚುಕ್ಕೆಯಾಗಿದೆ. ಕೂಡಲೇ ಅವರಿಬ್ಬರ ಅಮಾನತು ಕ್ರಮ ವಾಪಸ್ ಪಡೆಯದಿದ್ದರೆ ಎಲ್ಲಾ ಪ್ರಗತಿ ಪರರೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಿ.ಟಿ.ಆಚಾರ್ಯ, ಮಲ್ಲೇಶ್ ಚುಂಚನ ಹಲ್ಳಿ, ಕೆ.ಆರ್.ಗೋಪಾಲಕೃಷ್ಣ, ಡಾ. ಶ್ರೀನಿವಾಸ್ ಉಪಸ್ಥಿತರಿದ್ದರು.