ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳ ಮೆರಿಟ್ ನಿರಾಕರಿಸಿ ಅವರ ಹಕ್ಕು ಕಸಿಯುವ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಕೂಡಲೇ ಈ ಆದೇಶ ವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಶ್ರಯದಲ್ಲಿ ವಿವಿಧ ಸಂಘಟನೆಗಳು ಬುಧವಾರ ಮೌನ ಪ್ರತಿಭಟನೆ ನಡೆಸಿದವು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಮನುವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮಾಧಿ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು. ಅರಸು ಮಹಾಸಭಾ, ಜಿಲ್ಲಾ ವಿಶ್ವಕರ್ಮ ಮಹಾಮಂಡಲ, ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ, ಬಿವಿಎಸ್ ಸಂಘಟನೆ, ಜಿಲ್ಲಾ ಕುಂಬಾರರ ಸಂಘ, ಜಿಲ್ಲಾ ಉಪ್ಪಾರರ ಸಂಘ ಹಾಗೂ ಜಿಲ್ಲಾ ಸವಿತಾ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ಕಾರದ ಸದರಿ ಆದೇಶ ಖಂಡಿಸಿದರು.

ಈ ಆದೇಶದ ಪ್ರಕಾರ ಎಸ್‍ಸಿ-ಎಸ್‍ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೆರಿಟ್ ಗಳಿಸಿದ್ದರೂ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸುವಂತಿಲ್ಲ. ಬದಲಾಗಿ ಆಯಾಯ ಮೀಸಲಾತಿ ವರ್ಗದಲ್ಲೇ ಪರಿಗಣಿಸಬೇಕು ಎಂಬ ಆದೇಶ ಇದಾಗಿದೆ. ಕೂಡಲೇ ಇದನ್ನು ಹಿಂಪಡೆದು ಕೆಪಿಎಸ್‍ಸಿ ನೇಮಕಾತಿಯಲ್ಲಿ ಸರ್ಕಾರದ 1995ರ ಮೀಸಲಾತಿ ಅನುಪಾತದ ಆದೇಶ ಮುಂದುವರೆಯ ಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿದರು. ಇದಕ್ಕೂ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮಾಧಿಗೆ ಪ್ರತಿಭಟನಾಕಾರರು ಪುಷ್ಪ ನಮನ ಸಲ್ಲಿಸಿದರು. ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಎಂಜಿಆರ್ ಅರಸ್, ಅರಸು ಮಹಾಸಭಾದ ಅಧ್ಯಕ್ಷ ನಂದೀಶ್ ಅರಸ್, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದ ಶೆಟ್ಟಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಬಿಎಸ್‍ಪಿ ಮುಖಂಡ ಸೋಸಲೆ ಸಿದ್ದರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.