ಕೆಆರ್‍ಎಸ್‍ನಲ್ಲಿ ಪರ-ವಿರೋಧ ಪ್ರತಿಭಟನೆ

ಮಂಡ್ಯ: ರೈತರು, ಕೆಆರ್‍ಎಸ್ ಉಳಿಸಿ ಆಂದೋಲನದವರು ನಡೆಸಿದ ಪ್ರತಿಭಟನೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಕೆಆರ್‍ಎಸ್ ಸುತ್ತಮುತ್ತ ಗಣಿ ಪ್ರದೇಶಗಳಲ್ಲಿ ಸೋಮವಾರ ನಡೆಸಲು ಉದ್ದೇಶಿಸಿದ್ದ ಟ್ರಯಲ್ ಬ್ಲಾಸ್ಟ್ ಕಾರ್ಯ ವನ್ನು ಸ್ಥಗಿತಗೊಳಿಸಿ ಪುಣೆ ತಜ್ಞರ ತಂಡ ವಾಪಸ್ಸಾಯಿತು.

ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಯಿಂದಾಗಿ ಅಣೆಕಟ್ಟೆಗೆ ಅಪಾಯವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮವು ಪುಣೆಯ ಪ್ರೊ.ಘೋಷ್ ನೇತೃತ್ವದ ಸಿಡಬ್ಲ್ಯುಪಿಆರ್‍ಸಿ ತಜ್ಞರ ತಂಡದಿಂದ ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ರೈತರು, ಪ್ರಗತಿಪರರು, ಕೆಆರ್‍ಎಸ್ ಉಳಿಸಿ ಆಂದೋಲನದ ಹೋರಾಟಗಾರರು ನಡೆಸಿದ `ಗೋ ಬ್ಯಾಕ್ ಚಳವಳಿಯಿಂದಾಗಿ ಟ್ರಯಲ್ ಬ್ಲಾಸ್ಟ್ ಕಾರ್ಯವನ್ನು ಸ್ಥಗಿತಗೊಳಿಸಿ, ವಾಪಸ್ ತೆರಳಿತು.

ಪರ ವಿರೋಧ ಪ್ರತಿಭಟನೆ: ಕೆಆರ್‍ಎಸ್ ವ್ಯಾಪ್ತಿಯ ಕ್ವಾರೆಗಳಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪುಣೆಯ ಸಿಡಬ್ಲ್ಯುಪಿಆರ್‍ಸಿ ತಜ್ಞರಿಂದ ಟ್ರಯಲ್ ಬ್ಲಾಸ್ಟ್ ನಡೆಸಲು ಉದ್ದೇಶಿಸಿದ್ದ ವಿಷಯ ತಿಳಿದ ರೈತರು, ಪ್ರಗತಿಪರರು, ಕೆಆರ್‍ಎಸ್ ಉಳಿಸಿ ಆಂದೋಲನ ಹೋರಾಟಗಾರರು `ಗೋ ಬ್ಯಾಕ್’ ಚಳವಳಿ ನಡೆಸಿದರು.

ಇಂದು ಬೆಳಿಗ್ಗೆ 9 ರಿಂದಲೇ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಬಾರದು ಎಂದು ಪಟ್ಟು ಹಿಡಿದು, ಧರಣಿ ಆರಂಭಿಸಿದರು. ಸಿಡಬ್ಲ್ಯುಪಿಆರ್‍ಸಿ ತಜ್ಞರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜಕೀಯ ದುರುದ್ದೇಶ ಮತ್ತು ಗಣಿಗಾರಿಕಾ ಮಾಲೀಕರ ಅನುಕೂಲ ಕ್ಕಾಗಿಯಷ್ಟೇ ನಡೆಸುತ್ತಿರುವ ಈ ತನಿಖೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪ.ಮಲ್ಲೇಶ್, ಗುರುಪ್ರಸಾದ್ ಕೆರಗೋಡು, ಶಂಭೂನಹಳ್ಳಿ ಸುರೇಶ್, ಹುಲ್ಕೆರ ಮಹದೇವು, ಬಡಗಲಪುರ ನಾಗೇಂದ್ರ, ಮುದ್ದೇಗೌಡ, ಲತಾಶಂಕರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಮತ್ತೊಂದೆಡೆ ಗಣಿ ಮಾಲೀಕರು ಟ್ರಯಲ್ ಬ್ಲಾಸ್ಟ್ ಪರ ಧರಣಿ ನಡೆಸಿದರು.

ಇದೇ ವೇಳೆ ಮಾತನಾಡಿದ ಗಣಿ ಮಾಲೀಕರ ಸಂಘದ ಗೌರವಾಧ್ಯಕ್ಷ ರವಿ ಬೋಜೇಗೌಡ, ತಜ್ಞರ ಸಮಿತಿ ನೇಮಕ ಮಾಡಿ ಅಂದೋರೂ ಅವರೇ, ಆದರೆ ನಮ್ಮ ಮೇಲೆ ಬರೆ ಎಳೆಯೋ ಕೆಲಸಕ್ಕೆ ಪ್ರಗತಿಪರರು ಮುಂದಾಗಿದ್ದಾರೆ. ಟ್ರಯಲ್ ಬ್ಲಾಸ್ಟ್ ನಡೆಯಲಿ, ವರದಿ ನಮ್ಮ ವಿರುದ್ಧ ಬಂದರೆ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಿ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಗಣಿ ಮಾಲೀಕರಾದ ಕೃಷ್ಣಪ್ಪ, ಕೃಷ್ಣೇಗೌಡ, ನಟರಾಜು, ಸ್ವಾಮೀಗೌಡ, ರಾಹುಲ್, ಗುಣಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.