ಬೌದ್ಧಸ್ತೂಪ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜೂ.23(ಎಂಟಿವೈ)- ಬೌದ್ಧರ ಐತಿಹಾಸಿಕ ಸ್ಥಳಗಳು, ಸ್ತೂಪಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಬುದ್ಧ ಧಮ್ಮ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎರಡು ಸಾವಿರ ವರ್ಷ ಇತಿಹಾಸದ ಬೌದ್ಧರ ಐತಿಹಾಸಿಕ ಸ್ಥಳಗಳಿವೆ. ಇವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಈ ನಿಟ್ಟಿನಲ್ಲಿ ಬೌದ್ಧರ ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಅಯೋಧ್ಯೆಯಲ್ಲಿ ದೊರಕಿರುವ ಬೌದ್ಧಧರ್ಮದ ಅವಶೇಷಗಳು, ಕುರುಹುಗಳನ್ನು ಸಂರಕ್ಷಿಸುವ ಜೊತೆಗೆ ಆ ಸ್ಥಳವನ್ನು ಬೌದ್ಧರ ಸ್ಥಳವಾಗಿಯೇ ಉಳಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಹೆಚ್.ಶಿವರಾಜು, ನಿವೃತ್ತ ಅಭಿಯಂತರ ಆರ್.ನಟರಾಜು, ರಾಜು ಹಂಪಾಪುರ, ಪುಟ್ಟಸ್ವಾಮಿ, ನಿಸರ್ಗ ಸಿದ್ದರಾಜು, ಸಾಹಿತಿ ಕುಪ್ನಳ್ಳಿ ಎಂ.ಬೈರಪ್ಪ, ಸಂಶೋಧಕರಾದ ಮಂಜು, ರೂಪೇಶ್, ಶಿಕ್ಷಕ ಮಹಾದೇವಸ್ವಾಮಿ ಇತರರು ಪ್ರತಿಭಟನೆಯಲ್ಲಿದ್ದರು.