ಬಡವರ ಸ್ವಾಧೀನದಲ್ಲಿರುವ ಮುಡಾ ಮನೆಗಳಿಗೆ ಮಂಜೂರಾತಿ ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಮೈಸೂರು,ಜ.12(ಪಿಎಂ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ ನಿರ್ಮಾಣಗೊಂಡು ಯಾರಿಗೂ ಮಂಜೂರಾಗದ ಮನೆಗಳಲ್ಲಿ ವಾಸವಿರುವ ಬಡವರಿಗೆ ಮಂಜೂರಾತಿ ಪತ್ರ ನೀಡ ಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, 1945ರಲ್ಲಿ ಅಂದಿನ ನಗರ ವಿಶ್ವಸ್ಥ ಟ್ರಸ್ಟ್ ಬೋರ್ಡ್‍ನಿಂದ (ಇಂದಿನ ಮುಡಾ) ಮೈಸೂರು ನಗರದಲ್ಲಿ 12,145 ಮನೆಗಳು ನಿರ್ಮಾಣಗೊಂಡಿದ್ದವು. ಈ ಪೈಕಿ ಯಾರಿಗೂ ಮಂಜೂರಾಗದ 208 ಮನೆಗಳಲ್ಲಿ 185ಕ್ಕೂ ಹೆಚ್ಚಿನವುಗಳಲ್ಲಿ ಬಡವರು, ಹಿಂದುಳಿದವರು ಹಾಗೂ ದಲಿತರು ನೆಲೆ ಕಂಡುಕೊಂಡಿ ದ್ದಾರೆ. ಹೀಗೆ ಸ್ವಾಧೀನದಲ್ಲಿರುವ ಅವರಿಗೆ ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಸದರಿ 208 ಮನೆಗಳು ಯಾರಿಗೂ ಮಂಜೂರಾಗದೇ ಇರು ವುದು 2018ರ ಮಾ.13ರಂದು ನಡೆದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸಾಮಾನ್ಯ ಸಭೆಯ ನಡವಳಿ ಪುಸ್ತಕದ 74 ಮತ್ತು 75ನೇ ಪುಟದಲ್ಲಿ ದಾಖಲಾಗಿದೆ. ಸುಮಾರು 25 ವರ್ಷ ಗಳಿಂದ ಈ 185ಕ್ಕೂ ಹೆಚ್ಚು ಮನೆಗಳಲ್ಲಿ ನೆಲೆ ಕಂಡಿರುವ ಬಡವರು ಆಗಾಗ್ಗೆ ಮನೆ ಗಳನ್ನು ದುರಸ್ತಿ ಮಾಡಿಸಿರುವುದಲ್ಲದೆ, ವಿದ್ಯುತ್, ನೀರಿನ ಶುಲ್ಕ ಪಾವತಿಯನ್ನು ತಾವಿರುವ ಮನೆಗಳಿಗೆ ಸಂಬಂಧಿಸಿದಂತೆ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ 1985 ರಲ್ಲಿ ಸದರಿ ಮನೆಗಳಿಗೆ ಇದ್ದ ಬೆಲೆ ಪಾವತಿಗೆ ಅವಕಾಶ ನೀಡಿ, ಮಂಜೂ ರಾತಿ ಪತ್ರ ನೀಡಬೇಕೆಂದು ಆಗ್ರಹಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸಂಬಂಧಿಸಿದಂತೆ ಈಗಾಗಲೇ ಅಕ್ರಮ-ಸಕ್ರಮ ಆದೇಶವಾಗಿದೆ. ಅದೇ ರೀತಿ ಇಲ್ಲಿನ 185ಕ್ಕೂ ಹೆಚ್ಚು ಮನೆಗಳಲ್ಲಿ ನೆಲೆ ಕಂಡುಕೊಂಡ ಬಡವರಿಗೆ ಮಂಜೂ ರಾತಿ ಪತ್ರ ನೀಡಲು ರಾಜ್ಯ ಸರ್ಕಾರ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಸಮಿತಿ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲ, ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟರಾಜು, ಉಪಾಧ್ಯಕ್ಷೆ ಅಮೀನಾ ಬೇಗಂ, ಸಂಘಟನಾ ಕಾರ್ಯದರ್ಶಿ ಎಂ.ಮಾದೇಶ ಮತ್ತಿತರರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.