ಮಾಲ್‍ಗಳಲ್ಲಿ ದವಸ ಧಾನ್ಯದಂತಹ ಅಗತ್ಯ ವಸ್ತುಗಳ ಮಾರಾಟ ಖಂಡಿಸಿ ಮೈಸೂರು ಜಿಲ್ಲಾ ವಿತರಕರ ಸಂಘದಿಂದ ಪ್ರತಿಭಟನೆ

ಮೈಸೂರು:  ದವಸ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಲಯನ್ಸ್ ಮತ್ತು ಮೆಟ್ರೋ ಕಂಪನಿಗಳ ಮಾರಾಟ ಮಳಿಗೆ ಸೇರಿದಂತೆ ಮಾಲ್‍ಗಳಲ್ಲಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಮೈಸೂರು ಜಿಲ್ಲಾ ವಿತರಕರ ಸಂಘದ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೈಸೂರು ಅರಮನೆಯ ಉತ್ತರದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವರ್ತಕರು ಹಾಗೂ ಅಂಗಡಿಗಳ ಮಾಲೀಕರು ದೊಡ್ಡಗಡಿಯಾರ ವೃತ್ತ, ಚಿಕ್ಕಗಡಿಯಾರ ವೃತ್ತ, ಡಿ.ದೇವರಾಜ ಅರಸ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಧರಣಿ ನಡೆಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಕಾನೂನಿನಂತೆ ಪರವಾನಗಿ ಪಡೆದು ದಿನಸಿ ಪದಾರ್ಥಗಳು, ದಿನವಹಿ ಬಳಕೆಯ ವಸ್ತುಗಳು, ಅಗತ್ಯ ವಸ್ತುಗಳನ್ನು ಕಳೆದ ಹಲವು ವರ್ಷಗಳಿಂದ ಮಾರಾಟ ಮಾಡಿ ಜೀವನ ಸಾಗಿಸುತ್ತಾ ಬಂದಿರುವ ವ್ಯಾಪಾರಿಗಳಿಗೆ ಇದೀಗ ಮಾಲ್‍ಗಳು ಹೊಡೆತ ನೀಡುತ್ತಿವೆ. ಅದರಲ್ಲಿಯೂ ರಿಲಯನ್ಸ್ ಮತ್ತು ಮೆಟ್ರೋ ಕಂಪನಿಗಳ ಮಾರಾಟ ಮಳಿಗೆಗಳು ಹಾಗೂ ಇನ್ನಿತರ ಮಳಿಗೆಗಳು ತಲೆ ಎತ್ತಿದ ನಂತರ ವ್ಯಾಪಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಸಣ್ಣ ಸಣ್ಣ ವ್ಯಾಪಾರಿಗಳು ಹಾಗೂ ಪ್ರಾವಿಜನ್ ಸ್ಟೋರ್‍ಗಳು, ಗೂಡಂಗಡಿಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿವೆ. ಆದರೆ ದೊಡ್ಡ ದೊಡ್ಡ ಮಳಿಗೆಗಳಲ್ಲಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಗಟು ಹಾಗೂ ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹೋಲ್‍ಸೇಲ್ ಮತ್ತು ರಿಟೇಲ್ ವ್ಯಾಪಾರಿಗಳಿಂದ ಮೈಸೂರು ಜಿಲ್ಲೆಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಜೀವನ ನಡೆಸುತ್ತಿದ್ದಾರೆ. ಆದರೆ ದೊಡ್ಡ ದೊಡ್ಡ ಮಾಲ್‍ಗಳ ಹಾವಳಿ ಹೆಚ್ಚಾಗುತ್ತಿವೆ. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಆಫರ್ ನೀಡುವ ಮೂಲಕ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. ಇದರಿಂದ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳು ಬೀದಿಗೆ ಬೀಳುವಂತಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮಾಲ್‍ಗಳಲ್ಲಿ ದಿನಸಿ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ಚಿಲ್ಲರೆ ಹಾಗೂ ಹೋಲ್‍ಸೇಲ್ ಆಗಿ ಮಾರಾಟ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಎ.ಎಸ್.ಚೇತನ್, ಉಪಾಧ್ಯಕ್ಷ ಬಿ.ಕೆ.ಸತೀಶ್, ಪದಾಧಿಕಾರಿಗಳಾದ ಗಣೇಶ್ ರಾವ್, ಶಿವಾಜಿ ರಾವ್, ಮನೋಜ್, ರೋಶನ್ ಲಾಲ್, ಲಖನ್, ಚಂದ್ರಶೇಖರ್, ವಿಶ್ವನಾಥ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.