ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ: ದಿನಗೂಲಿ ನೌಕರರ ಮಹಾಮಂಡಲ ಎಚ್ಚರಿಕೆ

ಮೈಸೂರು: ದಿನಗೂಲಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾ ರಕ್ಕೆ ಸಾಕಷ್ಟು ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸೆ.30ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ಏರ್ಪಡಿಸಿರುವ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಮಂಡಲದ ಮೈಸೂರು-ಚಾಮರಾಜನಗರ ಜಿಲ್ಲಾ ಸಂಚಾಲಕ ಜಿ.ರಮೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಿರಂತರ ಹೋರಾಟದ ಫಲವಾಗಿ ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿಯಾಗಿದ್ದಾಗ ಹಲವು ಬೇಡಿಕೆಗಳಿಗೆ ಸ್ಪಂದಿಸಿ, ಸೌಲಭ್ಯ ಜಾರಿಗೊಳಿಸಿದ್ದರು. ಆದರೆ ಅವುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಇದುವರೆಗೂ ಸಾಧ್ಯವಾಗಿಲ್ಲ. 6ನೇ ವೇತನ ಆಯೋಗದಲ್ಲಿ ಗ್ರೂಪ್ ಡಿ, ಡಿ ನೌಕರರಿಗೆ 2018ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಮೂಲವೇತನ ಹೆಚ್ಚಿಸಬೇಕು. ಶೇ.100ರಷ್ಟು ತುಟ್ಟಿಭತ್ಯೆ, ಬಾಡಿಗೆ ಭತ್ಯೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಹೊಸ ವೇತನ ಶ್ರೇಣಿ ಜಾರಿಗೊಳಿಸಿ ಬಡ್ತಿ ಮಂಜೂರು ಮಾಡಬೇಕು. ಮೂರು ವರ್ಷಕ್ಕೊಮ್ಮೆ ವಾರ್ಷಿಕ ಬಡ್ತಿ, ಬಾಕಿ ವೇತನ, ಗಳಿಕೆ ರಜೆ, ನಗದೀಕರಣ, ಸೇವಾ ವಧಿಯಲ್ಲಿ ಮೃತಪಟ್ಟರೆ ಅನುಕಂಪದ ಆಧಾರದಲ್ಲಿ ನೌಕರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಜಗದೀಶ್, ಸಿದ್ದಯ್ಯ, ಗಂಗಾಧರ್, ಜಯಶಂಕರ್, ರಂಗಯ್ಯ ಉಪಸ್ಥಿತರಿದ್ದರು.