‘ದೋಸ್ತಿ’ ನಾಯಕರ ಪ್ರತಿಭಟನೆ

ಬೆಂಗಳೂರು: ವಿರೋಧಪಕ್ಷಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮತ್ತು ಸಚಿವರು ಐಟಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಐತಿಹಾಸಿಕ ಘಟನೆ ನಡೆಯಿತು. ಮುಖ್ಯಮಂತ್ರಿಗಳೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲಾಗಿದೆ.

ಸಿಬಿಐ ತನಿಖೆ ವಿರೋಧಿಸಿ, ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯವರು ಇತ್ತೀಚೆಗಷ್ಟೇ ಕೊಲ್ಕತ್ತಾದಲ್ಲಿ ಕೇಂದ್ರದ ವಿರುದ್ಧ ಸರಣಿ ಧರಣಿ ನಡೆಸಿದ್ದರು. ಇದು ಮಾಸುವ ಮುನ್ನವೇ ಕರ್ನಾಟಕದಲ್ಲೂ ಇಂತಹ ಘಟನೆ ನಡೆದಿದೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರ ಬಂಧುಗಳು, ಹಿತೈಷಿಗಳು, ಅವರ ಪಕ್ಷದ ಜೊತೆ ನಿಕಟ ಸಂಪರ್ಕವಿರುವ ಉದ್ಯಮಿಗಳು ಮತ್ತು ಸಚಿವ, ಶಾಸಕರ ಸಂಬಂಧಿಕರ ಮೇಲೆ ಏಕಾಏಕಿ ಆದಾಯ ತೆರಿಗೆ ಇಲಾಖಾ ಧಿಕಾರಿಗಳು ದಾಳಿ ನಡೆಸಿದ್ದೇ ಈ ಧರಣಿಗೆ ಕಾರಣವಾಗಿದೆ. ಜಾತ್ಯಾತೀತ ಜನತಾದಳ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ತಮ್ಮನ್ನು ಕಟ್ಟಿ ಹಾಕುವ ಉದ್ದೇಶದಿಂದ ತಮ್ಮ ಅಧೀನದ ಲ್ಲಿರುವ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ನಮ್ಮನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಭಾರತೀಯ ಜನತಾಪಕ್ಷದ ಮುಖಂಡರು ಮತ್ತು ಚುನಾವಣಾ ಕಣಕ್ಕಿಳಿ ದಿರುವ ಅಭ್ಯರ್ಥಿಗಳು ಕಪ್ಪು ಹಣವನ್ನು ಧಾರಾಳವಾಗಿ ವೆಚ್ಚ ಮಾಡುತ್ತಿದ್ದರೂ, ಅವರ ಮೇಲೆ ಯಾವುದೇ ಕಡಿ ವಾಣವಿಲ್ಲ. ಅವರ ಬಳಿ ಹಣ ದೊರೆತರೂ, ಅದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ, ಮುಖ್ಯಮಂತ್ರಿಯವರು ಒಂದು ಗಂಟೆಗೂ ಹೆಚ್ಚು ಕಾಲ ಕೇಂದ್ರದ ವಿರುದ್ಧ ಪ್ರತಿಭಟನೆ ಮತ್ತು ಧರಣಿ ನಡೆಸಿದರು. ಮುಖ್ಯಮಂತ್ರಿಯವರ ಬೆಂಬಲಕ್ಕೆ ಪ್ರದೇಶ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಆ ಪಕ್ಷದ ಸಿಎಲ್‍ಪಿ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ಸಂಸದರು, ಶಾಸಕರು, ಉಭಯ ಪಕ್ಷಗಳ ಮುಖಂಡರು ಕುಮಾರಸ್ವಾಮಿಗೆ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕರು ಕೇಂದ್ರ ಸರ್ಕಾರ ರಾಜಕೀಯಕ್ಕಾಗಿ ಈ ದುರ್ಮಾರ್ಗ ಹಿಡಿದಿದೆ. ತನ್ನ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆಯನ್ನು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಅವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರ ಬೆದರಿಕೆಗೆ ನಾವು ಜಗ್ಗುವುದಿಲ್ಲ.

ಇತ್ತೀಚೆಗೆ ಮೈತ್ರಿ ಸರ್ಕಾರ ಉರುಳಿಸಲು ಆಪರೇಷನ್ ಕಮಲದ ಮೂಲಕ ನಮ್ಮ ಶಾಸಕರನ್ನು 25 ರಿಂದ 30 ಕೋಟಿ ರೂ.ಗೆ ಖರೀದಿ ಮಾಡಲು ಹೊರಟಿದ್ದರು.

ಬಿಜೆಪಿ ನಾಯಕರಿಗೆ ಇಷ್ಟು ಹಣ ಎಲ್ಲಿಂದ ಬಂತು, ಈ ಬಗ್ಗೆ ನಮ್ಮ ಶಾಸಕರು ಸಾರ್ವಜನಿಕವಾಗಿ ಹೇಳಿಕೆ ನೀಡಿದರೂ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಲಿಲ್ಲ. ಇದೀಗ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಒತ್ತಡ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ದಾಳಿಗೆ ಮುಂದಾಗಿದೆ ಎಂದು ದೂರಿದ್ದಲ್ಲದೆ, ಪ್ರಧಾನಿ ವಿರುದ್ಧ ಹರಿಹಾಯ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಆದಾಯ ತೆರಿಗೆ ಇಲಾಖೆ ದಾಳಿಗಳಿಗೆ ಹೆದರುವುದಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿ, ಕಾಂಗ್ರೆಸ್-ಜೆಡಿಎಸ್ ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಶಪಥ ಮಾಡಿದರು. ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ಯಾರನ್ನು ಬೇಕಾದರೂ ದಾಳಿಗೆ ಕಳುಹಿಸಿ, ಇಂತಹ ಬೆದರಿಕೆಗೆಲ್ಲ ಹೆದರುವುದಿಲ್ಲ. ಬಿಜೆಪಿಯ ಪತನ ಕರ್ನಾಟಕದಿಂದಲೇ ಆರಂಭವಾಗಿದೆ ಎಂಬುದನ್ನು ಮರೆತಿದ್ದೀರಾ, ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಹೋರಾಡಿ, ಬಿಜೆಪಿಯನ್ನು ಸೋಲಿಸಲಿವೆ. ವಿರೋಧ ಪಕ್ಷಗಳನ್ನು ಬಗ್ಗು ಬಡಿಯಲು ಕೇಂದ್ರ ಬಿಜೆಪಿ ನಾಯಕರು ಕೀಳುಮಟ್ಟದ, ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ದೇಶದ ವ್ಯವಸ್ಥೆ ಹಾಳು ಮಾಡಲು ಹೊರಟಿದ್ದಾರೆ ಎಂದರು.

ರಾಜ್ಯದ ವಿವಿಧೆಡೆ ಐಟಿ ದಾಳಿ ವಿರುದ್ಧ ಎರಡೂ ಪಕ್ಷಗಳ ನಾಯಕರು ನಗರದ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷರ ಮಾತು ಕೇಳಿ ಐಟಿ ಅಧಿಕಾರಿ ಗಳು ದಾಳಿ ಮಾಡುತ್ತಿದ್ದಾರೆ. ಈ ದಾಳಿಗಳ ಹಿಂದಿರುವ ಐಟಿ ಅಧಿಕಾರಿಯ ಹಿನ್ನೆಲೆ ಏನೆಂದು ಗೊತ್ತಿದೆ. ಈ ಅಧಿಕಾರಿಯ ಎಲ್ಲ ಮಾಹಿತಿ ನನ್ನ ಬಳಿ ಇದೆ.

ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೆಹಲಿಯಲ್ಲಿ ಡೈರಿ ವಿಷಯ ಬಹಿರಂಗವಾಗುತ್ತಿದ್ದಂತೆ ಕರ್ನಾಟಕದಲ್ಲಿನ ಐಟಿ ಅಧಿಕಾರಿ ಸಮಜಾಯಿಷಿ ನೀಡಿದ್ದು ಏಕೆ? ಈ ರೀತಿ ಸಮಜಾಯಿಷಿ ನೀಡಲು ನೀವ್ಯಾರು? ಎಂದು ಪ್ರಶ್ನಿಸಿದರು.

ಈ ಅಧಿಕಾರಿ ಸದ್ಯದಲ್ಲೇ ನಿವೃತ್ತರಾಗಲಿದ್ದು, ಇವರನ್ನು ರಾಜ್ಯಪಾಲರನ್ನಾಗಿ ಮಾಡುವ ಆಮಿಷವೊಡ್ಡಿ ಇಂತಹ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಐಟಿ ಅಧಿಕಾರಿಗಳೇ ಕೇಂದ್ರದ ನಾಯಕರ ಏಜೆಂಟರಾಗಿ ಕೆಲಸ ಮಾಡಬೇಡಿ, ನಿಮ್ಮ ನಡವಳಿಕೆ ತಿದ್ದಿಕೊಳ್ಳಿ ಎಂದು ಎಚ್ಚರಿಸಲು ನಾವು ಇಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೇವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ, ಆಪ್ತರ ಹಾಗೂ ಸಂಬಂಧಿಗಳ ಮನೆ, ಕಚೇರಿಗಳ ಮೇಲೆ ಮಾತ್ರ ಏಕೆ ಐಟಿ ದಾಳಿ ಮಾಡುತ್ತಿದ್ದೀರಾ? ಬಿಜೆಪಿಯವರು ಹರಿಶ್ಚಂದ್ರನ ಮಕ್ಕಳೇ ಎಂದು ಪ್ರಶ್ನಿಸಿದರು. ಇದುವರೆಗೆ ನಡೆಸಿದ ದಾಳಿಯಲ್ಲಿ ಏನೇನು ವಶಪಡಿಸಿಕೊಂಡಿದ್ದೀರಾ, ಯಾವ ಭಾರೀ ದಾಖಲೆಗಳು ಸಿಕ್ಕಿವೆ, ಎಲ್ಲವನ್ನು ಜನರ ಮುಂದಿಡಬೇಕು. ನಿಮಗೆ ಇಂತಹ ದಾಳಿ ನಡೆಸಲು ಅಧಿಕಾರ ಕೊಟ್ಟವರು ಯಾರು. ನಮ್ಮ ಬಳಿಯೂ ಎಸಿಬಿ ಇದೆ. ನಾವು ಇದನ್ನು ಬಳಸಿಕೊಂಡು ಹೆದರಿಸಬಹುದು, ಕಾಲ ಬಂದಾಗ ಏನು ಮಾಡಬೇಕೆಂದು ನಮಗೂ ತಿಳಿದಿದೆ ಎಂದು ಎಚ್ಚರಿಸಿದರು.