ವರುಣಾ ಕ್ಷೇತ್ರದ ಜನತೆಗೆ ಪಡಿತರ, ಅವಶ್ಯಕ ಪದಾರ್ಥ ಕಲ್ಪಿಸಿ

ತಿ.ನರಸೀಪುರ. ಏ. 12(ಎಸ್‍ಕೆ)- ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಜನತೆಗೆ ಪಡಿತರ ಸೇರಿದಂತೆ ಅವಶ್ಯಕ ಪದಾರ್ಥಗಳನ್ನು ವಿತರಿಸುವಂತೆ ಇಂದು ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೋವಿಡ್ 19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಅಗತ್ಯವಿರುವ ಪಡಿತರ ಹಾಗೂ ಹಾಲು, ಮಾಸ್ಕ್ ಸೇರಿದಂತೆ ಇನ್ನಿತರ ವಸ್ತುಗಳ ಪಟ್ಟಿ ಮಾಡಿ ಕೆಪಿಸಿಸಿಗೆ ಕಳುಹಿಸಿಕೊಡುವಂತೆ ಪುರಸಭಾ ಸದಸ್ಯರು ವರುಣಾ ಬ್ಲಾಕ್ ಅಧ್ಯಕ್ಷ ರಮೇಶ್ ಮುದ್ದೇಗೌಡರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಹಾಲು, ತರಕಾರಿ, ಔಷಧಿಗಳು ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ಪ್ರತಿ ವಾರ್ಡ್‍ಗಳಿಗೆ ಸಮಾನಾಂತರವಾಗಿ ಹಂಚಿಕೆ ಮಾಡ ಬೇಕು. ಕ್ಷೇತ್ರದ ಶಾಸಕ ಯತೀಂದ್ರ ಸಿದ್ದ ರಾಮಯ್ಯ ಅವರು ತಾಲೂಕು ಕಚೇರಿಗೆ ಒಂದಿಷ್ಟು ಆಹಾರ ಪದಾರ್ಥಗಳ ಕಿಟ್ ವಿತರಿಸಿ ಹೋಗಿದ್ದಾರೆ. ಯಾವುದೇ ಸದಸ್ಯರ ಗಮನಕ್ಕೆ ತರದೇ ಹಂಚಿಕೆ ಮಾಡಲಾಗಿದೆ. ಪುರಸಭೆ ವತಿಯಿಂದ ಕೆಲವೇ ಮಂದಿಗೆ ಹಾಲು ವಿತರಣೆ ಮಾಡಲಾಗಿದ್ದು, ಸಮ ರ್ಪಕವಾಗಿ ವಿತರಣೆಯಾಗಿಲ್ಲ. ಪ್ರತಿಯೊಂದು ಕುಟುಂಬಕ್ಕೂ ಸಹ ಹಾಲು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪುರಸಭೆ ವಾರ್ಡ್‍ಗಳಲ್ಲಿ ಕಡು ಬಡವ ರಿದ್ದು ಅವರನ್ನು ಗುರುತಿಸಿ ಎಲ್ಲರಿಗೂ ಆಹಾರದ ಕಿಟ್ ವಿತರಿಸಲು ಕೆಪಿಸಿಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಟಿ.ಎಂ. ನಂಜುಂಡಸ್ವಾಮಿ ಮನವಿ ಮಾಡಿದರು.

ಪುರಸಭೆ ವತಿಯಿಂದ ಹಾಲು ವಿತರಣೆ ಬಿಟ್ಟರೆ ಇನ್ನಾವುದೇ ಅಗತ್ಯ ವಸ್ತುಗಳನ್ನು ನೀಡಿಲ್ಲ. ಭಾರತೀಯ ಜನತಾ ಪಕ್ಷದ ವತಿಯಿಂದ ನಿತ್ಯ ಬಡವರು ನಿರಾಶ್ರಿತರಿಗೆ ಆಹಾರದ ಕಿಟ್‍ಗಳು, ಉಪಹಾರ ಹಾಗೂ ಮನೆ ಮನೆಗಳಿಗೆ ಔಷಧ ನೀಡಲಾಗುತ್ತಿದೆ. ಇದರಿಂದಾಗಿ ರಾಷ್ಟ್ರೀಯ ಪಕ್ಷದ ಸದಸ್ಯರಾದ ನಾವು ಮುಜುಗರಕ್ಕೊಳಗಾ ಗುತ್ತಿದ್ದೇವೆ. ತಕ್ಷಣವೇ ಕೆಪಿಸಿಸಿ ಮಧ್ಯ ಪ್ರವೇಶಿಸಿ ಬಡ ಜನತೆಗೆ ಅಗತ್ಯ ಸೌಲಭ್ಯ ಕಲ್ಪಿಸಿ ಕೊಡಲು ಮುಂದಾಗಬೇಕು ಎಂದರು.

ಸದಸ್ಯರ ಮನವಿ ಕ್ರೋಢೀಕರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಸೋಮವಾರ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಸದಸ್ಯರ ಬೇಡಿಕೆ ಯನ್ನು ಶಾಸಕರ ಗಮಕ್ಕೆ ತರುವ ಮೂಲಕ ಕಾರ್ಯಕರ್ತರಿಗಾ ಗುತ್ತಿರುವ ಮುಜುಗರ ತಪ್ಪಿಸಲು ಒತ್ತಾಯಿಸಲಾಗುವುದು ಎಂದರು.

ಪುರಸಭಾ ಸದಸ್ಯರಾದ ಹೆಳವರಹುಂಡಿ ಸೋಮು, ಬಾದಾಮಿ ಮಂಜು, ಮದನ್ ರಾಜ್, ಮೆಡಿಕಲ್ ನಾಗರಾಜು, ಕುರುಬ ಸಂಘದ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು ಶ್ರೀಕಂಠ, ಹೇಮಂತ್ ಕುಮಾರ್, ಸ್ವಾಮಿ, ಮುಸುವಿನಕೊಪ್ಪಲು ಪ್ರಕಾಶ್, ರಮೇಶ್ ಮತ್ತಿತರರಿದ್ದರು.