ಕ್ರಿಕೆಟ್ ಆಡುವ ವಿಚಾರಕ್ಕೆ ಜಗಳ: ಮನನೊಂದ ಯುವಕ ನೇಣಿಗೆ ಶರಣು

ನಂಜನಗೂಡು, ಏ.19(ರವಿ)-ಕ್ರಿಕೆಟ್ ವಿಚಾರಕ್ಕೆ ಏರ್ಪಟ್ಟ ಜಗಳದಿಂದ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗ್ರಾಮದ ಚಿಕ್ಕಬಸವಯ್ಯ ಪುತ್ರ ಚಂದ್ರು(28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋ¥ದಡಿ ಅದೇ ಗ್ರಾಮದ ಸಂತೋಷ್, ಮಂಜು, ನಾಗರಾಜು, ಮಹದೇವ್ ಹಾಗೂ ರಾಜೇಶ್‍ರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಶನಿವಾರ ಸಂಜೆ ಚಂದ್ರು ಮನೆಯ ಬಳಿ ಸಂತೋಷ್, ಮಂಜು, ನಾಗರಾಜು ಸೇರಿ ದಂತೆ ಯುವಕರ ಗುಂಪು ಕ್ರಿಕೆಟ್ ಆಡುತ್ತಿತ್ತು. ಈ ವೇಳೆ ಚಂದ್ರು ಮನೆಯ ಕಿಟಕಿ ಗಾಜಿಗೆ ಬಾಲು ಬಿದ್ದಿದೆ. ಚಂದ್ರು ಸಹೋದರ ಮಹದೇವಸ್ವಾಮಿ ಕ್ರಿಕೆಟ್ ಆಟಗಾರರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತರಾದ ಸಂತೋಷ್, ಮಂಜು, ನಾಗರಾಜು ಅವರು ಮಹದೇವಸ್ವಾಮಿ ಹಾಗೂ ಅವರ ಪತ್ನಿ ಶಕುಂತಲಾ, ಸಹೋದರ ಸೋಮ ಅವರನ್ನು ನಿಂಧಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಚಂದ್ರುಗೂ ಜೀವ ಬೆದರಿಕೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಮನನೊಂದ ಚಂದ್ರು ತಮ್ಮ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಮಹದೇವಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಜಮೀನಿಗೆ ತೆರಳಿದ ಚಂದ್ರು ರಾತ್ರಿಯಾದರೂ ಮನೆಗೆ ಬಾರದಿರುವು ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭಾಕರ್‍ರಾವ್ ಶಿಂಧೆ, ಎಸ್‍ಐ ಟಿ.ಆರತಿ, ಸಿಪಿಐ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ದೇಹ ಒಪ್ಪಿಸಲಾಯಿತು. ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.