ಶ್ರವಣಬೆಳಗೊಳ- ಕುಶಾಲನಗರ ರೈಲು ಮಾರ್ಗ ಸಮೀಕ್ಷೆ

ಮಡಿಕೇರಿ,ಮೇ ೨೭- ಭಾರತೀಯ ರೈಲ್ವೆ, ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಮಾರ್ಗ ಯೋಜನೆ ಜಾರಿಗೆ ಮುಂದಾ ಗಿದೆ. ಶ್ರವಣಬೆಳಗೊಳ-ಕುಶಾಲನಗರ ನಡುವಿನ ಹೊಸ ರೈಲು ಮಾರ್ಗ ಸಮೀಕ್ಷೆಗೆ ನೈರುತ್ಯ ರೈಲ್ವೆ ಪ್ರಧಾನ ಕಚೇರಿಗೆ ಸೂಚನೆ ನೀಡಲಾಗಿದೆ.

ಶ್ರವಣಬೆಳಗೊಳ-ಹೊಳೆನರಸೀಪುರ-ಕೊಣನೂರು-ಕುಶಾಲನಗರ ರೈಲ್ವೆ ಯೋಜನೆ ಸಮೀಕ್ಷೆ ನಡೆಸಲು ನಿರ್ದೇಶನ ನೀಡ ಲಾಗಿದೆ. ರೈಲ್ವೆ ಬೋರ್ಡ್ ಯೋಜನಾ ನಿರ್ವಾಹಕ ಪಂಕಜ್ ಕುಮಾರ್ ಮೇ ೧೨ ರಂದು, ಪತ್ರ ಮುಖೇನಾ ಸೂಚನೆ ನೀಡಿ ದ್ದಾರೆ. ಇದರೊಂದಿಗೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ
ಮತ್ತು ಕೊಡಗು ಜಿಲ್ಲೆಯ ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ನಿರೀಕ್ಷೆ ಫಲನೀಡುವ ಕಾಲ ಸನ್ನಿಹಿತವಾಗಿದೆ.

೧೧೭ ಕಿ.ಮೀ. ಮಾರ್ಗ: ಉದ್ದೇಶಿತ ನೂತನ ರೈಲು ಮಾರ್ಗ ೧೧೭ ಕಿ.ಮೀ. ಸಮೀಕ್ಷೆಗಾಗಿ ಅಗತ್ಯ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಮಾರ್ಗ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಹಾಸನ ಜಿಲ್ಲೆ ಶ್ರವಣಬೆಳಗೊಳದಿಂದ ಹೊರಡುವ ರೈಲು ಹೊಳೆನರಸೀಪುರ, ಕೊಣನೂರು ಮಾರ್ಗವಾಗಿ ಕೊಡಗು ಜಿಲ್ಲೆಯ ಕುಶಾಲನಗರವನ್ನು ತಲುಪಲಿದೆ. ಈ ರೈಲು ಮಾರ್ಗದಿಂದ ಆಗುವ ಲಾಭ, ವೆಚ್ಚ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮೀಕ್ಷಾ ವರದಿ ಒಳಗೊಂಡಿರಲಿದೆ. ಈಗಾಗಲೇ ರೈಲ್ವೆ ಇಲಾಖೆ ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಈ ಎರಡೂ ರೈಲು ಮಾರ್ಗಗಳ ಸಂಪರ್ಕಿಸುವ ಲೆಕ್ಕಾಚಾರ ಇಲಾಖೆಯದ್ದಾಗಿದೆ.