ಕೊಡಗಿನ ಹಲವೆಡೆ ಮಳೆ

ಮಡಿಕೇರಿ, ಮಾ.26- ಬೇಸಿಗೆಯ ಬೇಗೆಯಿಂದ ಬಸವಳಿದಿದ್ದ ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಮಳೆ ಸುರಿದಿದೆ. ಗುಡುಗು-ಗಾಳಿ ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಧರೆಗೆ ತಂಪೆರೆದಂತಾಗಿದೆ. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಂಗಡಿ ಮಳಿಗೆಗಳ ಮುಂದೆ ಆಶ್ರಯ ಪಡೆದಿದ್ದು ಕಂಡು ಬಂತು. ಮಡಿಕೇರಿ ನಗರ, ಗಾಳಿಬೀಡು, ಮಕ್ಕಂದೂರು, ಹೆಮ್ಮೆತ್ತಾಳು, ಮೇಘತ್ತಾಳು, ಮುಕೋಡ್ಲು, ಹಟ್ಟಿಹೊಳೆ, ಮೇಕೇರಿ, ಹಾಕತ್ತೂರು, ಬಿಳಿಗೇರಿ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಕಾಫಿ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ. ಪ್ರಸ್ತುತ ಕಾಫಿ ಗಿಡದಲ್ಲಿ ಮೊಗ್ಗುಗಳು ಅರಳುತ್ತಿದ್ದು, ಇದೀಗ ಸುರಿದ ಮಳೆಯಿಂದ ಕಾಫಿ ಹೂ ಅರಳಲು ಸಹಕಾರಿಯಾಗಿದೆ. ಇನ್ನು ಪಂಪ್ ಸೆಟ್‍ಗಳನ್ನು ಬಳಸಿ ನೀರು ಹಾಯಿಸುವ ಮೂಲಕ ಕಾಫಿ ಹೂಗಳನ್ನು ಅರಳಿಸಿದ್ದ ಬೆಳೆಗಾರರಿಗೆ ಇದೀಗ ಸುರಿದ ಮಳೆ ಬ್ಯಾಕಿಂಗ್ ನೀಡಿದ್ದು, ಬೆಳೆಗಾರರಿಗೆ ವರುಣ ನೆಮ್ಮದಿ ನೀಡಿದ್ದಾನೆ.