ಸಿಎಂ ಬಿಎಸ್‍ವೈ ಕಾರ್ಯಕ್ರಮಗಳ ಸ್ಥಳಾಂತರಕ್ಕೆ ಕಾರಣವಾದ ಇಲಿ!

ಬೆಂಗಳೂರು,ಅ.14-ಆಡಳಿತದ ಶಕ್ತಿಕೇಂದ್ರ ವಿಧಾನ ಸೌಧದಲ್ಲಿ ಇಲಿ- ಹೆಗ್ಗಣಗಳ ಕಾಟ ಮಿತಿಮೀರಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಿಧಾನಸೌಧದ 3ನೆ ಮಹಡಿಯ ಲ್ಲಿನ ಕೊಠಡಿ ಸಂಖ್ಯೆ-313ರಲ್ಲಿ ಇಲಿ ಸತ್ತು ದುರ್ನಾತ ಬೀರಿದ ಪರಿಣಾಮ ಮುಖ್ಯಮಂತ್ರಿ ತಮ್ಮ ಅಧಿಕೃತ ಕಾರ್ಯಕ್ರಮವನ್ನು ಸ್ಥಳಾಂತರಿಸಿದ ಘಟನೆ ನಡೆಯಿತು. ಸೋಮವಾರ ಸಿಎಂ ಯಡಿಯೂರಪ್ಪ ಅವರಿಗೆ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ವಿವಿಧ ನಿಯೋಗಗಳ ಭೇಟಿಯ ಕಾರ್ಯಕ್ರಮ ನಿಗದಿಯಾಗಿತ್ತು. ಅದರನ್ವಯ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಸಿಎಂ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಆ ಕೊಠಡಿಯಲ್ಲಿ ಇಲಿಯೊಂದು ಸತ್ತು, ದುರ್ನಾತ ಬೀರುತ್ತಿತ್ತು. ಈ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತಂದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಸಚಿವಾಲಯ ಸಿಬ್ಬಂದಿ ಮತ್ತು ಅಧಿಕಾರಿ ಗಳು ಸತ್ತ ಇಲಿಯ ದುರ್ನಾತವನ್ನು ಸಹಿಸಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಸಿಎಂ ಕೊಠಡಿಗೆ ಆಗಮಿಸಿದ್ದು, ಅವರ ಮೂಗಿಗೆ ಕೆಟ್ಟ ವಾಸನೆ ಬಡಿದಿದೆ. ದುರ್ನಾತ ಸಹಿಸ ಲಾಗದೆ ಅವರು, ‘ಏನ್ರಿ ಇದು, ಕೊಠಡಿಯನ್ನು ಸರಿಯಾಗಿ ಶುಚಿಗೊಳಿಸಿಲ್ಲವೇ? ಕಡೇ ಪಕ್ಷ ಸರಿಪಡಿಸಬೇಕೆಂಬ ಕನಿಷ್ಠ ಜ್ಞಾನ ಇಲ್ಲವೇ’ ಎಂದು ಅಧಿಕಾರಿಗಳನ್ನು ಯಡಿಯೂರಪ್ಪ ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ‘ಕೂಡಲೇ ಇದನ್ನು ಸ್ವಚ್ಛಗೊಳಿಸಿ’ ಎಂದು ತಾಕೀತು ಮಾಡಿದರು. ಅಧಿಕಾರಿಗಳು ಸಬೂಬು ಹೇಳಲು ಮುಂದಾದ ಹಿನ್ನೆಲೆಯಲ್ಲಿ ಕೆರಳಿದ ಬಿಎಸ್‍ವೈ, ‘ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಅದು-ಇದು ಹೇಳಬೇಡಿ, ಮೊದಲು ಸರಿಮಾಡಿ. ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಎಚ್ಚರಿಸಿ, ಕೂಡಲೇ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಸಿಎಂ ಕಚೇರಿಗೆ ವರ್ಗಾವಣೆ ಮಾಡಿಕೊಂಡರು.