ನವೀಕೃತ ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆ

ಮೈಸೂರು: ಮೈಸೂರಿನ ಬಹು ನಿರೀಕ್ಷಿತ ನವೀಕೃತ ಇಎಸ್‍ಐ ಆಸ್ಪತ್ರೆ ನೂತನ ಕಟ್ಟಡವನ್ನು ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ ಉದ್ಘಾಟಿಸಿದರು.

ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ಕೇಂದ್ರ ಸರ್ಕಾರದ 35 ಕೋಟಿ ರೂ. ವೆಚ್ಚ ದಲ್ಲಿ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನವೀಕೃತ ಇಎಸ್‍ಐ ಆಸ್ಪತ್ರೆ ನೂತನ ಕಟ್ಟಡಕ್ಕೆ 2011ರ ಫೆಬ್ರವರಿ 19ರಂದು ಅಂದಿನ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.

ಆರಂಭದಲ್ಲಿ ಕೇಂದ್ರದ ಕಾರ್ಮಿಕ ಸಚಿ ವಾಲಯದಿಂದ 24.28 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತಾದರೂ, ಈ ನಡುವೆ ಕಳಪೆ ಕಾಮಗಾರಿ ಹಾಗೂ ಇನ್ನಿತರ ಕಾರಣಗಳಿಂದಾಗಿ ಇಎಸ್‍ಐ ಕಟ್ಟಡ ಕಾಮ ಗಾರಿಯು ನಿಂತು ಹೋಗಿತ್ತು. ನಂತರ ಕೇಂದ್ರದಲ್ಲಿ ಬಂದ ಎನ್‍ಡಿಎ ಸರ್ಕಾರ ದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮತ್ತೆ 9 ಕೋಟಿ ರೂ.ಗಳ ಅನುದಾನ ತರಿಸಿಕೊಂಡು ಸ್ಥಗಿತಗೊಂಡಿದ್ದ ಆಸ್ಪತ್ರೆ ಕಟ್ಟಡದ ಕಾಮಗಾರಿಯನ್ನು ಚುರುಕು ಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಒಟ್ಟು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿ ರುವ ನೂತನ ಕಟ್ಟಡವನ್ನು ರಾಜ್ಯ ಕಾರ್ಮಿಕ ಸಚಿವ
ವೆಂಕಟರಮಣಪ್ಪ ಅವರು ಉದ್ಘಾಟಿಸಿ, ಕಾರ್ಮಿಕರ ಆರೋಗ್ಯ ಸೇವೆಗೆ ಸಮರ್ಪಿಸಿದರು. ಇದೇ ವೇಳೆ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕಾರ್ಯನಿಮಿತ್ತ ಸಮಾರಂಭ ಆರಂಭವಾಗುವ ಮೊದಲೇ ನಿರ್ಗಮಿಸಿದರು.

ಇಎಸ್‍ಐ ಫಲಾನುಭವಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಲೆಂದು ಮೈಸೂರಿನಲ್ಲಿ 1981ರ ಮೇ ತಿಂಗಳಿನಲ್ಲಿ 100 ಹಾಸಿಗೆಗಳ ಇಎಸ್‍ಐ ಆಸ್ಪತ್ರೆಯನ್ನು ಆರಂಭಿಸಲಾ ಗಿತ್ತು. 13 ಚಿಕಿತ್ಸಾಲಯ(ಡಿಸ್ಪೆನ್ಸರಿ)ಗಳನ್ನು ಹೊಂದಿರುವ ಆಸ್ಪತ್ರೆಯು 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಸುಮಾರು 8 ಲಕ್ಷ ಫಲಾನುಭವಿಗಳು ಆಸ್ಪತ್ರೆ ವ್ಯಾಪ್ತಿಗೆ ಬರು ವರು. ಮೆಡಿಸಿನ್, ಸರ್ಜರಿ, ಸ್ತ್ರೀರೋಗ, ಮೂಳೆ, ಕಿವಿ-ಮೂಗು-ಗಂಟಲು ವಿಭಾಗ, ಕಣ್ಣು, ಚರ್ಮ, ಪೆಥಾಲಜಿ, ರೇಡಿಯಾಲಜಿ, ಅನೆಸ್ತೇಷಿಯಾ, ತುರ್ತು ಚಿಕಿತ್ಸಾ ವಿಭಾಗಗಳೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿವೆ. ಇದೀಗ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿರುವುದರಿಂದ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ತಜ್ಞ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿದಲ್ಲಿ ಸೂಪರ್ ಸ್ಪೆಷಾಲಿಟಿ ಗುಣಮಟ್ಟದ ಚಿಕಿತ್ಸೆ ಕಾರ್ಮಿಕರು ಹಾಗೂ ಕುಟುಂಬದವರಿಗೆ ಲಭ್ಯವಾಗುತ್ತದೆ.

ಕಟ್ಟಡಕ್ಕೆ 13 ಕೋಟಿ ರೂ. ವೆಚ್ಚದ ಸಲಕರಣೆಗಳು ಅಗತ್ಯವಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿರುವುದರಿಂದ ಕೇಂದ್ರ ಸರ್ಕಾರದಿಂದ ಶೇ.75ರಷ್ಟು ಹಣ ಬಿಡುಗಡೆ ಮಾಡಿಸು ತ್ತೇನೆ, ಉಳಿದ ಹಣ ಹಾಕಿ ಟೆಂಡರ್ ಕರೆದು ವೈದ್ಯಕೀಯ ಉಪಕರಣಗಳನ್ನು ತರಿಸಿ ಎಂದು ಸಂಸದ ಪ್ರತಾಪ್‍ಸಿಂಹ ಅವರು ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರಿಗೆ ಆಸ್ಪತ್ರೆ ಉದ್ಘಾಟನೆ ವೇಳೆ ತಿಳಿಸಿದರು. ಶಾಸಕ ಎಲ್.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸದರಾದ ಪ್ರತಾಪ್‍ಸಿಂಹ, ಆರ್.ಧ್ರುವನಾರಾ ಯಣ, ಎಲ್.ಆರ್.ಶಿವರಾಮೇಗೌಡ, ಶಾಸಕರಾದ ತನ್ವೀರ್ ಸೇಠ್, ಅಶ್ವಿನ್‍ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮಾ ಸುಲ್ತಾನ್, ನಜೀರ್ ಅಹಮದ್, ಕಾರ್ಮಿಕರ ರಾಜ್ಯ ವಿಮಾ ನಿಗಮದ ಸದಸ್ಯ ಕೆ.ವಿ.ಶೇಖರ್‍ರಾಜು, ಕಾರ್ಪೊರೇಟರ್‍ಗಳಾದ ಎಸ್‍ಬಿಎಂ.ಮಂಜು, ಗುರುವಿನಾಯಕ, ಇಎಸ್‍ಐಸಿ ವೈದ್ಯಕೀಯ ಆಯುಕ್ತ ಡಾ. ಪಿ.ಎಲ್.ಚೌಧರಿ, ಅಡಿಷನಲ್ ಕಮೀಷ್ನರ್ ಕೆ.ಹೆಚ್.ನಾಯಕ್ ಹಾಗೂ ರಾಜ್ಯ ಕಾರ್ಮಿಕ ಆಯುಕ್ತ ಎಸ್.ಪಾಲಯ್ಯ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.