ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡಲು ಆಗ್ರಹÀ

ಭಾರತೀನಗರ, ಏ.27- ಕೊರೊನಾ ಹಿನ್ನೆಲೆ ಯಲ್ಲಿ ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ ರಾಜ್ಯದ 224 ಕ್ಷೇತ್ರಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಡಿ.ಸಿ.ತಮ್ಮಣ್ಣ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶಾಸಕ ತಮ್ಮಣ್ಣ ಕಳೆದ ಒಂದೂವರೆ ವರ್ಷದಿಂದ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳಿಗೆ ಮಂಜೂ ರಾತಿ ನೀಡದಿರುವುದರಿಂದ ಜನರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜನರು ಪ್ರಸ್ತುತ ಆಯವ್ಯಯದಲ್ಲಿ ಸರ್ಕಾರ ಘೋಷಿಸಿರುವ 5 ಲಕ್ಷ ಕೋಟಿಗಳ ಹಣದಲ್ಲಿ ಇಲ್ಲಿಯವರೆಗೆ ಎಷ್ಟು ಲಕ್ಷ ಕೋಟಿ ಹಣ ಬಿಡುಗಡೆ ಮಾಡಿದೆ. ಉಳಿದ ಹಣದಲ್ಲಿ ರಾಜ್ಯದ ಆದ್ಯತೆಯ ಅಭಿವೃದ್ಧಿ ಕಾಮಗಾರಿಗಳಾದ ಬಹುಗ್ರಾಮ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಇಲಾಖೆಯ ಆಸ್ಪತ್ರೆಗಳ ಆಧುನೀಕರಣ, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂದು ಪ್ರಶ್ನಿಸುತ್ತಿದ್ದು, ಜನಪ್ರತಿನಿಧಿಗಳಾದ ನಾವು ಉತ್ತರ ನೀಡಲು ಅಸಹಾಯಕರಾಗಿದ್ದೇವೆ ಎಂದಿದ್ದಾರೆ.

ಕೊರೊನಾ ಮಹಾಮಾರಿ ರಾಜ್ಯಕ್ಕೆ ಕಾಲಿಟ್ಟು ಒಂದೂವರೆ ವರ್ಷ ಕಳೆದಿದೆ. ಪ್ರಥಮ ಬಾರಿಗೆ ಕೊರೊನಾ ಪ್ರಾರಂಭವಾದಾಗ ನಿಯಂತ್ರಣಕ್ಕೆ ಶ್ರಮಿಸಿದ್ದೀರಿ. ಕಳೆದ 6 ತಿಂಗಳಿಂದ ತಜ್ಞ ವಿಜ್ಞಾನಿಗಳು, ವೈದ್ಯರು 2ನೇ ಅಲೆ ಬರುತ್ತದೆ, ಅದು ಮೊದಲನೇ ಅಲೆಗಿಂತ ತೀವ್ರವಾಗಿರುತ್ತದೆ ಎಂದು ಹೇಳಿದ್ದರು. ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳದೆ 2ನೇ ಅಲೆಯನ್ನೂ ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.
ಬೆಂಗಳೂರು ನಗರದಲ್ಲೇ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ, ರಾಜ್ಯದ ಎಲ್ಲ ಜನರಿಗೂ ಲಸಿಕೆ ಲಭ್ಯವಾಗುತ್ತಿಲ್ಲ. ಕೊರೊನಾ ರೋಗ ತಡೆಗಟ್ಟುವ ರೆಮ್ ಡಿಸೀವರ್ ಕೂಡ ಆಸ್ಪತ್ರೆ ಗಳಿಗೆ ಹಾಗೂ ಹೊರ ರೋಗಿಗಳಿಗೆ ಸಿಗುತ್ತಿಲ್ಲ. 900 ರೂ.ಗಳ ರೆಮ್‍ಡಿಸಿವರ್ 10 ಸಾವಿರ ರೂ.ನಿಂದ 20 ಸಾವಿರ ರೂ. ವರೆಗೆ ಕಾಳಸಂತೆ ಯಲ್ಲಿ ಮಾರಾಟವಾಗುತ್ತಿದೆ. ಹಣವಂತರು ಹೇಗೋ ಕೊಳ್ಳುತ್ತಿದ್ದಾರೆ. ಆದರೆ, ಬಡವರು, ನಿರ್ಗತಿಕರು ತಮ್ಮ ಜೀವನವನ್ನು ಭಗವಂತನಿ ಗೊಪ್ಪಿಸಿ, ದಿಕ್ಕಿಲ್ಲದ ಪ್ರಾಣಿಗಳ ರೀತಿ ಪ್ರಾಣ ಬಿಡುತ್ತಿದ್ದಾರೆ ಎಂದು ತಮ್ಮಣ್ಣ ತಿಳಿಸಿದ್ದಾರೆ.

10 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ: ಬೆಂಗಳೂರು ನಗರದ ನಾಲ್ಕು ದಿಕ್ಕಿನಲ್ಲಿ ತಲಾ 5 ಸಾವಿರ ಬೆಡ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕಾದ ಸಲಕರಣೆಗಳನ್ನು ಒದಗಿಸಬೇಕೆಂದು ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 50 ರಿಂದ 100 ವೆಂಟಿಲೇಟರ್‍ಗಳ ವ್ಯವಸ್ಥೆ, ತಾಲೂಕು ಕೇಂದ್ರಗಳಲ್ಲಿ 25 ವೆಂಟಿಲೇಟರ್‍ಗಳ ವ್ಯವಸ್ಥೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 2 ರಿಂದ 5 ವೆಂಟಿಲೇಟರ್, 20 ಬೆಡ್‍ಗಳ ವ್ಯವಸ್ಥೆ ಮಾಡಬೇಕು ಹಾಗೂ ರಾಜ್ಯದ 6.50 ಕೋಟಿ ಜನರಲ್ಲಿ 10 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ವ್ಯವಸ್ಥೆ ಮಾಡಬೇಕೆಂದು ಕೋರಿದ್ದಾರೆ.

ರೆಮ್‍ಡೆಸಿವರ್ ಔಷಧಿಯನ್ನು ಸರ್ಕಾರಿ ದರದಲ್ಲಿ ಉಚಿತವಾಗಿ ಶೀಘ್ರವಾಗಿ ಲಭಿಸು ವಂತೆ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಿರಿಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು, ಜಿಲ್ಲಾ ಕೇಂದ್ರದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಅಭಿವೃದ್ಧಿ ಕಾರ್ಯಗಳೂ ನಡೆಯಲಿ: ಕೊರೊನಾ ತಹಬದಿಗೆ ತರುವುದರ ಜೊತೆಗೆ ರಾಜ್ಯದ ಅಭಿವೃದ್ಧಿ ಕಾರ್ಯಗಳೂ ನಡೆಯ ಬೇಕಿದೆ. 2020-21ನೇ ಸಾಲಿನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ನಿಮ್ಮ ಸರ್ಕಾರ ತಡೆ ಹಿಡಿದಿದೆ. ತಾಂತ್ರಿಕ, ಆಡಳಿತಾತ್ಮಕ ಅನುಮೋದನೆ ಯಾಗಿ ಟೆಂಡರ್ ಪ್ರಕ್ರಿಯೆ ನಡೆದು ಕಾಮ ಗಾರಿಗಳು ಸಾಕಷ್ಟು ಪ್ರಗತಿಯಾಗಿರುವ ಕಾಮ ಗಾರಿಗಳಿಗೂ ತಡೆ ನೀಡಲಾಗಿದೆ. ಇದರಿಂದ ಸಾಕಷ್ಟು ಕೆಲಸ ಮಾಡಿರುವ ಗುತ್ತಿಗೆದಾರರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.