ಆರ್‍ಎಂಪಿ ವಿಜ್ಞಾನಿ ನಿಗೂಢ ನಾಪತ್ತೆ

ಮೈಸೂರು, ಅ.10-ಮೈಸೂರು ಹೊರವಲಯದ ಇಲವಾಲದಲ್ಲಿರುವ ಆರ್‍ಎಂಪಿ (ರೇರ್ ಮೆಟೀ ರಿಯಲ್ ಪ್ರಾಜೆಕ್ಟ್) ಬಾಬಾ ಪರಮಾಣು ಸಂಶೋ ಧನಾ ಸಂಸ್ಥೆಯ ಯುವ ವಿಜ್ಞಾನಿ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಬಾಬಾ ಪರಮಾಣು ಸಂಸ್ಥೆಯ ಸೈಂಟಿಫಿಕ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾ(26) ಅಕ್ಟೋಬರ್ 6ರಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಆರ್‍ಎಂಪಿ ಆಡಳಿತಾಧಿಕಾರಿ ಟಿ.ಕೆ. ಭೋಸ್ ಅವರು ಶುಕ್ರವಾರ ಸಂಜೆ ಇಲವಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಯುವ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾ ಅವರು ಸೆಪ್ಟೆಂಬರ್ 17ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಅಕ್ಟೋಬರ್ 5ರಂದು ಅವರನ್ನು ದೂರವಾಣಿ ಮೂಲಕ ಸಂಶೋಧನಾ ಸಂಸ್ಥೆಯಿಂದ ಸಂಪರ್ಕಿಸಿದಾಗ ಅವರು ಮರು ದಿನ (ಅಕ್ಟೋಬರ್ 6) ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಅಭಿಷೇಕ್ ರೆಡ್ಡಿ ವಾಸವಿದ್ದ ಇಲವಾಲದ ನ್ಯೂ ಜನತಾ ಕಾಲೋನಿಯ ಮನೆ ಬಾಗಿಲಿಗೆ ಬೀಗ ಹಾಕಿಲ್ಲ. ರೆಡ್ಡಿ ಮತ್ತು ಅವರ ಹೋಂಡಾ ಆಕ್ಟೀವಾ (ಕೆಎ 09 ಜೆಎ 0013) ಕಾಣಿಸುತ್ತಿಲ್ಲ ಎಂದು ಅವರ ನೆರೆ ಮನೆ ನಿವಾಸಿ ಹಾಗೂ ಸಹೋದ್ಯೋಗಿ ಶುಭಂ ನಿರಂಜನ್ ಪಾಟೀಲ್ ತಿಳಿಸಿದ ಮೇರೆಗೆ ಪರಮಾಣು ಸಂಶೋಧನಾ ಸಂಸ್ಥೆಯ ಕೆಲ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗಲೂ ಮನೆ ಬಾಗಿಲಿಗೆ ಬೀಗ ಹಾಕಿಲ್ಲದಿರು ವುದು ಕಂಡು ಬಂದಿದೆ. ಅವರು ವಾಸವಿದ್ದ ಮನೆ ಮಾಲೀಕರು ಹಾಗೂ ಲಭ್ಯವಿದ್ದ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಟಿ.ಕೆ.ಭೋಸ್ ತಿಳಿಸಿದ್ದು, ನಾಪತ್ತೆಯಾಗಿರುವ ಅಭಿಷೇಕ್ ರೆಡ್ಡಿ ಅವರನ್ನು ಪತ್ತೆ ಹಚ್ಚಿ ಕೊಡುವಂತೆ ಮನವಿ ಮಾಡಿದ್ದಾರೆ. ಅಭಿಷೇಕ್ ರೆಡ್ಡಿ ಅವರು ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾಗಿದ್ದು, ಅವರು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇವರ ಬಗ್ಗೆ ಮಾಹಿತಿ ಇರುವವರು ಠಾಣೆಯ ದೂರವಾಣಿ ಸಂಖ್ಯೆ 0821-2402222 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 0821-2444800 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.