4500 ವಾಹನ ಮಾಲೀಕರಿಂದ 4,50,000 ರೂ. ದಂಡ ಸಂಗ್ರಹ

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಗುರುವಾರದಿಂದ ಮೈಸೂರು ನಗರದಾದ್ಯಂತ ಎಲ್ಲಾ 5 ಸಂಚಾರ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಪಾರ್ಕಿಂಗ್ ಸ್ಥಳಗಳಲ್ಲಿ ಉಪಕರಣದ ಮೂಲಕ ವಾಹನಗಳ ಬಾಕಿ ಉಳಿದಿರುವ ದಂಡ ತಿಳಿದುಕೊಂಡು ಮಾಲೀಕರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.

ಒಂದು ವೇಳೆ ಸ್ಥಳದಲ್ಲಿ ದಂಡ ಪಾವತಿಸದಿದ್ದಲ್ಲಿ ಅಥವಾ ಮಾಲೀಕರು ಬಾರದಿದ್ದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚಲಿಸುತ್ತಿರುವ ವಾಹನಗಳನ್ನು ತಡೆದು ಪರಿಶೀಲಿಸುವ ಕಾರ್ಯಾಚರಣೆಯೂ ತೀವ್ರಗೊಂಡಿದೆ.

ಗುರುವಾರ ಒಂದೇ ದಿನ 4500 ವಾಹನಗಳ ಮಾಲೀಕರಿಂದ ಒಟ್ಟು 4,50,000 ರೂ. ಬಾಕಿ ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದೂ ಸಹ ಕಾರ್ಯಾಚರಣೆ ಮುಂದುವರಿದಿದ್ದು, ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಶಿವರಾಂಪೇಟೆ ರಸ್ತೆ ಸೇರಿದಂತೆ ವಿವಿಧೆಡೆ ವಾಹನಗಳ ತಪಾಸಣೆ ಕಾರ್ಯ ನಡೆಯಿತು. ದಂಡ ಬಾಕಿ ಉಳಿದಿರುವ ವಾಹನಗಳ ಮಾಲೀಕರು ಹತ್ತಿರದ ಸಂಚಾರ ಠಾಣೆಗಳಿಗೆ ಅಥವಾ ಬ್ಲಾಕ್‍ಬೆರಿ ಉಪಕರಣ ಹೊಂದಿರುವ ಸಂಚಾರ ಪೊಲೀಸ್ ಅಧಿಕಾರಿ ಬಳಿ ದಂಡ ಪಾವತಿಸಿ ರಶೀದಿ ಪಡೆಯಬೇಕೆಂದು ಕೋರಲಾಗಿದ್ದು, ತಪ್ಪಿದರೆ ಪಾರ್ಕಿಂಗ್ ಸ್ಥಳದಿಂದ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.