ಆನ್‍ಲೈನ್‍ನಲ್ಲಿ ಆರ್‍ಟಿಓ ಸೇವೆ

ಮನೆಯಲ್ಲೇ ಕುಳಿತು www.parivahan.gov.in/parivahan ವೆಬ್‍ಸೈಟ್ ಮೂಲಕ ಡಿಎಲ್‍ಗೆ ಅರ್ಜಿ ಸಲ್ಲಿಸಬಹುದು

ಮೈಸೂರು, ಮೇ 25(ಆರ್‍ಕೆ)-ಇನ್ನು ಮುಂದೆ ಆರ್‍ಟಿಓ ಸೌಲಭ್ಯ ಪಡೆಯುವುದು ಸುಲಭ. ಮಧ್ಯ ವರ್ತಿಗಳ ಹಾವಳಿ ತಪ್ಪಿಸಿ ಪಾರದರ್ಶಕ ಸೇವೆ ಒದಗಿಸಲು ಸಾರಿಗೆ ಇಲಾಖೆಯು ಇಂದಿನಿಂದ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಿದೆ.

ಈ ಕುರಿತು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರಿನ ಆರ್‍ಟಿಓ (ಪಶ್ಚಿಮ) ಎಂ.ಪ್ರಭುಸ್ವಾಮಿ ಅವರು, ಮೈಸೂರು ವಿಭಾಗಕ್ಕೆ ಸೇರಿದ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಇಂದಿ ನಿಂದ ಆರ್‍ಟಿಓ ಕಚೇರಿಯ ಎಲ್ಲಾ ಸೇವೆ ಗಳನ್ನು ಆನ್‍ಲೈನ್ ವ್ಯಾಪ್ತಿಗೆ ತರಲಾಗಿದೆ ಎಂದರು. ವಿಳಾಸ ಬದಲಾವಣೆ, ಡಿಎಲ್ ನವೀಕರಣ, ಡೂಪ್ಲಿಕೇಟ್ ಡಿಎಲ್, ಡಿಎಲ್ ಹೆಚ್ಚುವರಿ ಹಿಂಬರಹ, ಡಿಎಲ್‍ಗೆ ಅರ್ಜಿ ಸಲ್ಲಿಕೆ, ಎಲ್‍ಎಲ್‍ಆರ್ ಪರೀಕ್ಷೆ ಸೇರಿದಂತೆ ಎಲ್ಲಾ ಬಗೆಯ ಸಾರ್ವಜನಿಕ ಸೇವೆಗಳನ್ನು ಇನ್ನು ಮುಂದೆ ಜನರು ತಮ್ಮ ಮನೆಯಲ್ಲೇ ಕುಳಿತು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆ ಗಳನ್ನು ಅಪ್‍ಲೋಡ್ ಮಾಡಬೇಕು. ಆನ್‍ಲೈನ್‍ನಲ್ಲೇ ಹಣವನ್ನೂ ಪಾವತಿಸ ಬಹುದಾಗಿದ್ದು, ಅದಕ್ಕಾಗಿ ಆರ್‍ಟಿಓ ಕಚೇರಿಗಳ ಬಳಿ ಸಾಲಾಗಿ ನಿಂತು, ಮಧ್ಯ ವರ್ತಿಗಳನ್ನು ಅವಲಂಬಿಸುವ ಅಗತ್ಯವಿಲ್ಲ ಎಂದೂ ಪ್ರಭುಸ್ವಾಮಿ ಅವರು ತಿಳಿಸಿದರು.

ಸಾರಿಗೆ ಇಲಾಖೆಯು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಎನ್‍ಐಸಿ ಅವರ ತಾಂತ್ರಿಕ ನೆರವಿನಿಂದ ವಾಹನ ಚಾಲನಾ ಅನುಜ್ಞಾ ಪತ್ರಗಳ ಸೇವೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿಗೊಳಿ ಸಿರುವ ಕೇಂದ್ರೀಕೃತ ಹಾಗೂ ವೆಬ್ ಆಧಾರಿತ ಸಾರಥಿ-4 ಸಾಫ್ಟ್‍ವೇರ್ ಅಳವಡಿಸಿಕೊಂಡಿದೆ.

ಸಾರ್ವಜನಿಕರು ಈ ಆಧುನಿಕ ತಂತ್ರಜ್ಞಾನದ ಸಾಫ್ಟ್‍ವೇರ್ ಮೂಲಕ ವಾಹನ ಕಲಿಕಾ ಅನುಜ್ಞಾ ಪತ್ರ ಮತ್ತು ಅನುಜ್ಞಾ ಪತ್ರಗಳನ್ನು ಪಡೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.