ರಾಜ್ಯ ಒಕ್ಕಲಿಗರ ಸಂಘ ಉಳಿಸಲು ಮತ ನೀಡಿ: ಡಾ.ಕೆ.ಮಹದೇವ್ ಮನವಿ

ಮೈಸೂರು,ನ.10(ಆರ್‍ಕೆಬಿ)-ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಗಳಿಗೆ ಡಿ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ, ಊಟಿ ಒಳಗೊಂಡ ಕ್ಷೇತ್ರದಿಂದ 3 ಸ್ಥಾನಗಳಿಗೆ ನಾನು ಮತ್ತು ರೈಲ್ವೆ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಎಂ.ಬಿ.ಮಂಜೇಗೌಡ, ಕಾರ್ಪೋರೇಟರ್ ಕೆ.ವಿ.ಶ್ರೀಧರ್ ಕುಂಬಾರಕೊಪ್ಪಲು ಸ್ಪರ್ಧಿಸಿದ್ದು, ಮತ ದಾರರು ನಮಗೆ ಮತ ನೀಡುವಂತೆ ರಾಜ್ಯ ಸಂಘದ ಮಾಜಿ ಪ್ರಧಾನ ಕಾರ್ಯ ದರ್ಶಿ ಹಾಗೂ ಮೂಳೆ, ಕೀಲು ರೋಗ ತಜ್ಞ ಡಾ.ಕೆ.ಮಹದೇವ್ ಮನವಿ ಮಾಡಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು 2008ರಿಂದ 2013ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ 8 ಕೋಟಿ ಸಾಲ ಹಿಂತಿರುಗಿಸಿ ಸಂಘವನ್ನು ಸಾಲಮುಕ್ತವೆಂದು ಘೋಷಿಸಲಾಗಿದೆ. 25 ವರ್ಷ ಗಳಿಂದ ನೂತನ ಸದಸ್ಯತ್ವಕ್ಕೆ ಇದ್ದ ಬೇಡಿಕೆಯನ್ನು ಈಡೇರಿಸಿದ್ದೇನೆ. ಒಕ್ಕಲಿಗರ ಮಕ್ಕಳಿಗೆ ಉತ್ತೇಜನ, ಕಿಮ್ಸ್ ಮೆಡಿಕಲ್ ಕಾಲೇಜಿನ ಸುಧಾರಣೆ, ಒಕ್ಕಲಿಗರ ಡೆಂಟರ್ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳ ಹೆಚ್ಚಳ, ಕಿಮ್ಸ್ ಆಸ್ಪತ್ರೆಯಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಆಶ್ವರೂಢ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಇತ್ಯಾದಿ ಮಾಡಿದ್ದೇನೆ ಎಂದರು.

ಸಂಘಟನೆಯನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ದು ಸಮಾಜದ ಮತ್ತಷ್ಟು ಕಾರ್ಯ ಚಟುವಟಿಕೆ ನಡೆಸಬೇಕಿದೆ. ಮೈಸೂರು ಭಾಗದಲ್ಲಿ ಒಟ್ಟು 24,000 ಮತದಾರರಿದ್ದು, ನನ್ನ ಸಾಧನೆಯನ್ನು ಪರಿಗಣಿಸಿ ನಮ್ಮನ್ನು ಹರಸುವಂತೆ ಮತದಾರರಲ್ಲಿ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ಡಾ.ಎಂ.ಬಿ.ಮಂಜೇಗೌಡ, ಕಾಪೋರೇಟರ್ ಕೆ.ವಿ.ಶ್ರೀಧರ್ ಕುಂಬಾರಕೊಪ್ಪಲು ಉಪಸ್ಥಿತರಿದ್ದರು.