ಮೈಸೂರು, ಏ.12(ಪಿಎಂ)- ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಡ ವರ್ಗದವರಿಗೆ ಉಚಿತವಾಗಿ ನೀಡುತ್ತಿರುವ ನಂದಿನಿ ಹಾಲಿನ ಪೊಟ್ಟಣಗಳನ್ನು ಮಾರಾಟ ಮಾಡುತ್ತಿದ್ದ ನಂದಿನಿ ಹಾಲಿನ ಮಳಿಗೆಯೊಂದರ ವಿರುದ್ಧ ಕಾನೂನು ಮಾಪನಶಾಸ್ತ್ರ ಇಲಾಖೆಯು ಪ್ರಕರಣ ದಾಖಲಿಸಿದೆ.
ಮೈಸೂರಿನ ಮಂಡಿ ಮೊಹಲ್ಲಾ ಮಾರುಕಟ್ಟೆ ವೃತ್ತದ ಬಳಿಯ ನಂದಿನಿ ಹಾಲಿನ ಮಳಿಗೆ ಯೊಂದರ ವಿರುದ್ಧ ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಎಂ.ಮಹದೇವಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಈ ಉಚಿತ ಹಾಲಿನ ಪೊಟ್ಟಣಗಳು ಮಳಿಗೆಗೆ ಪೂರೈಕೆಯಾದ ಸಂಬಂಧ ತನಿಖೆ ನಡೆಸುವಂತೆ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಶನಿವಾರ ರಾತ್ರಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಕೆ.ಎಂ.ಮಹದೇವಸ್ವಾಮಿ ಮಳಿಗೆಯಲ್ಲಿ ಪರಿಶೀಲಿಸಿದ ವೇಳೆ ಉಚಿತವಾಗಿ ನೀಡುವ 1 ಲೀ. ನಂದಿನಿ ಹಾಲಿನ 8 ಪೊಟ್ಟಣಗಳು ಪತ್ತೆಯಾಗಿವೆ. ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಕೆ.ಎಂ.ಮಹದೇವಸ್ವಾಮಿ, ಮಳಿಗೆ ಪರಿಶೀಲನೆ ವೇಳೆ ಮಾಲೀಕರು ಇರಲಿಲ್ಲ. ಮಾರಾಟ ಮಾಡುತ್ತಿದ್ದ ಸಿಬ್ಬಂದಿ ಮಾತ್ರವೇ ಇದ್ದರು. ಅಲ್ಲದೆ, ಭಾನುವಾರ ಬೆಳಿಗ್ಗೆ ಪೂರೈಕೆಯಾಗ ಬೇಕಿದ್ದ ಹಾಲು ಶನಿವಾರ ರಾತ್ರಿಯೇ ಪೂರೈಕೆಯಾಗಿದೆ. ಹೀಗಾಗಿ ಈ ಸಂಬಂಧ ತನಿಖೆ ನಡೆಸುವಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.