ಸರ್ವರ್ ವೈಫಲ್ಯ: ವಿವಿಧ ಫಲಾನುಭವಿಗಳ ಪರದಾಟ

  • ಅಗತ್ಯ ಕ್ರಮ ಕೈಗೊಳ್ಳದ ಅಧಿಕಾರಿಗಳಿಂದ ಸಬೂಬು ಹೇಳಿಕೆ

ಮೈಸೂರು: ಮೈಸೂರಿನ ಮಿನಿ ವಿಧಾನಸೌಧದಲ್ಲಿ ನಾಡ ಕಚೇರಿಯಲ್ಲಿ ಕಳೆದ 20 ದಿನಗಳಿಂದ ಸರ್ವರ್ ಕೈಕೊಟ್ಟಿದ್ದು, ರೈತರು ವಂಶವೃಕ್ಷ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದೃಢೀಕರಣ ಪತ್ರ ಪಡೆಯಲು ಪರದಾಡುವಂತಾಗಿದೆ.

ಮಿನಿ ವಿಧಾನಸೌಧದಲ್ಲಿರುವ ಭೂಮಿ ಕೇಂದ್ರ, ನಾಡ ಕಚೇರಿ ಮಾತ್ರವಲ್ಲದೆ ಮೈಸೂರು ಜಿಲ್ಲೆಯ ಎಲ್ಲಾ ನಾಡ ಕಚೇರಿಯಲ್ಲಿಯೂ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ರೈತರಿಗೆ ಬೇಕಾದ 38 ಬಗೆಯ ಸೇವೆ ಒದಗಿಸಲು ತೊಡಕಾಗಿದೆ. ಬೆಂಗಳೂರಿನಲ್ಲಿರುವ `ಭೂಮಿ ಮಾನಿಟರಿಂಗ್ ಸೆಲ್(ಸಿಎಂಸಿ)’ ನಿಯಂತ್ರಣದಲ್ಲಿರುವ ಸರ್ವರ್ ಜೂ.8ರಿಂದ ಕೈಕೊಟ್ಟಿದ್ದರೂ ಇದುವರೆಗೂ ಅದನ್ನು ಸರಿಪಡಿಸುವುದಕ್ಕೆ ಮುಂದಾಗದೆ ಇರುವುದು ರೈತರು ಹಾಗೂ ನಾಡ ಕಚೇರಿಯ ಸಿಬ್ಬಂದಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಸರ್ವರ್ ದೋಷದಿಂದಾಗಿ ವಂಶ ವೃಕ್ಷ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ ಮತ್ತು ಪಂಗಡದ ದೃಢೀಕರಣ ಪತ್ರ, ವಾಸಸ್ಥಳದ ದೃಢೀಕರಣ ಪತ್ರ, ಮೃತ ಸದಸ್ಯರ ದೃಢೀಕರಣ ಪತ್ರ, ಗೇಣ ದೃಢೀಕರಣ ಪತ್ರ ಸೇರಿದಂತೆ ವಿವಿಧ ಪ್ರಮಾಣ ಪತ್ರ ಪಡೆಯುವುದಕ್ಕೆ ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಪ್ರತಿ ದಿನ ವಿವಿಧ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 28 ದಿನಗಳಿಂದ 2300 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಯಾರಿಗೂ ಅವರ ಬೇಡಿಕೆಯ ಪ್ರಮಾಣ ಪತ್ರ ನೀಡುವುದಕ್ಕೆ ಸಾಧ್ಯವಾಗದೇ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂಸಿ ನಿಯಂತ್ರಣದ ಮುಖ್ಯ ಸರ್ವರ್‍ನಿಂದಲೇ ರಾಜ್ಯದ ಎಲ್ಲಾ ನಾಡ ಕಚೇರಿಗಳಲ್ಲಿಯೂ ಅರ್ಜಿಗಳ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಆನ್‍ಲೈನ್ ಅಥವಾ ನಾಡ ಕಚೇರಿಯಲ್ಲಿ ನೇರವಾಗಿ ಸಲ್ಲಿಕೆಯಾಗುವ ಅರ್ಜಿಗಳು ಸ್ವೀಕೃತವಾಗಿ ಆಯಾ ನಾಡ ಕಚೇರಿಯ ಉಪ ತಹಶೀಲ್ದಾರ್ ಲಾಗಿನ್‍ನಲ್ಲಿ ಶೇಖರಣೆಯಾಗುತ್ತವೆ. ಆ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೆ ಉಪ ತಹಶೀಲ್ದಾರರು ಬಯೋಮೆಟ್ರಿಕ್ಸ್‍ನಲ್ಲಿ ಬೆರಳಿನ ಮುದ್ರೆ(ತಂಬ್ ಇಂಪ್ರೆಷನ್)ಒತ್ತಬೇಕಾಗಿದೆ. ಆದರೆ ಇದಕ್ಕೆ ಸರ್ವರ್ ಅಗತ್ಯವಿದೆ. ಮೈಸೂರು ನಗರದಲ್ಲಿ ಸರ್ವರ್ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ಉಪ ತಹಶೀಲ್ದಾರರು ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೆ ಹರಸಾಹಸ ಮಾಡುತ್ತಿದ್ದರಾದರೂ ಸರ್ವರ್ ಕೆಟ್ಟಿರುವುದರಿಂದ ಸುಮ್ಮನಾಗಿದ್ದಾರೆ. ಇಂದಲ್ಲಾ ನಾಳೆ ಸರ್ವರ್ ಸರಿಯಾಗಬಹುದು ಎಂದು ಕಾದು ಕುಳಿತಿರುವ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದವರು ಪ್ರತಿ ದಿನ ಹಿಡಿಶಾಪ ಹಾಕುವಂತಾಗಿದೆ.

ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ ಓವರ್ ದ ಕೌಂಟ್ ಆಫ್ ಸರ್ವಿಸ್(ಒಟಿಸಿ) ಹೊಸ ಸಾಫ್ಟ್‍ವೇರ್ ಜಾರಿಗೊಳಿಸಿತ್ತು. ಒಟಿಸಿ ಕಾರ್ಯಕ್ರಮದಡಿ ಈ ಹಿಂದೆ ಯಾವ ಪ್ರಮಾಣ ಪತ್ರವನ್ನು ಪಡೆದಿರುತ್ತಾರೋ ಅದನ್ನೇ ಅರ್ಜಿ ಸಲ್ಲಿಸಿದಾಗ ನೀಡಬಹುದಾಗಿತ್ತು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಟಿಸಿ ವ್ಯವಸ್ಥೆ ಪೂರ್ಣಗೊಂಡಿದ್ದರಿಂದ ಆ ಜಿಲ್ಲೆಗಳಲ್ಲಿ ಸರ್ವರ್ ಕೈಕೊಟ್ಟಿದ್ದರೂ ಒಟಿಸಿ ಸಾಫ್ಟ್‍ವೇರ್‍ನಡಿ ದಾಖಲಾಗಿದ್ದ ಮಾಹಿತಿಯನ್ನು ಆಧರಿಸಿ ಹಳೆಯ ಪ್ರಮಾಣ ಪತ್ರಕ್ಕೆ ಹೊಸ ದಿನಾಂಕ ಮುದ್ರಿಸಿ ನೀಡಬಹುದಾಗಿತ್ತು. ಆದರೆ ಮೈಸೂರಿನಲ್ಲಿ ಒಟಿಸಿ ವ್ಯವಸ್ಥೆ ಪೂರ್ಣಗೊಳ್ಳದೆ ಇರುವುದರಿಂದ ಸರ್ವರ್ ನೆಚ್ಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ 20 ದಿನಗಳಿಂದ ಸರ್ವರ್ ಕೆಟ್ಟಿದ್ದರೂ ಹಿರಿಯ ಅಧಿಕಾರಿಗಳು ಸಮಸ್ಯೆ ಇತ್ಯಥ್ರ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟು ಮಾಡಿದೆ.

ತಾಂತ್ರಿಕ ದೋಷದ ಫಲಕ: ವಿವಿಧ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವವರು ಪ್ರತಿದಿನ ನಾಡ ಕಚೇರಿಗೆ ಬಂದು ಸಿಬ್ಬಂದಿಗಳಿಗೆ ಪ್ರಮಾಣ ಪತ್ರ ನೀಡುವಂತೆ ಕೇಳುತ್ತಿದ್ದಾರೆ. ಅರ್ಜಿದಾರರ ಒತ್ತಡವನ್ನು ತಡೆಯಲಾಗದೆ ಸಿಬ್ಬಂದಿ ನಾಡ ಕಚೇರಿ ಮುಂದೆ `ತಾಂತ್ರಿಕ ದೋಷವುಂಟಾಗಿದೆ. ಮೂರು ದಿನಗಳವರೆಗೂ ಯಾವುದೇ ಪ್ರಮಾಣ ಪತ್ರ ನೀಡುವುದಕ್ಕೆ ಸಾಧ್ಯವಿಲ್ಲ’ ಎಂಬ ಫಲಕ ಹಾಕಿ ಸಮಾಧಾನ ಮಾಡುತ್ತಿದ್ದಾರೆ. ನಾಲ್ಕನೇ ದಿನ ಕೌಂಟರ್ ತೆರೆದು ಪ್ರಮಾಣ ಪತ್ರ ಕೇಳಲು ಬಂದವರಿಗೆ ಸರ್ವರ್ ತೊಂದರೆ ಎಂದು ಹೇಳುವ ಮೂಲಕ ಅರ್ಜಿದಾರರನ್ನು ವಾಪಸ್ಸು ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

ಆರ್‍ಟಿಸಿ ಸಿಕ್ಕುತ್ತಿದೆ…

ಸರ್ವರ್ ಲೋಪದಿಂದ ವಂಶವೃಕ್ಷ ಸೇರಿದಂತೆ ವಿವಿಧ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವವರಿಗೆ ಸೇವೆ ಸ್ಥಗಿತಗೊಂಡಿದ್ದರೂ, ಆರ್‍ಟಿಸಿ ನೀಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಇರುವುದರಿಂದ ರೈತರಿಗೆ ಬೇಕಾಗುವ ಸರ್ವೇ ನಂಬರ್‍ಗಳ ಆರ್‍ಟಿಸಿ ಲಭ್ಯವಾಗುತ್ತಿರುವುದು ಸಮಾಧಾನದ ಸಂಗತಿ.

View Comments (0)