ಇಂದು ಮೈಸೂರಿಂದ ಪಶ್ಚಿಮ ಬಂಗಾಳಕ್ಕೆ ಶ್ರಮಿಕ್ ರೈಲು

ಮೈಸೂರು, ಮೇ 28(ಆರ್‍ಕೆ)ಮೈಸೂರಿಂದ ಪಶ್ಚಿಮ ಬಂಗಾಳದ ಜಲಪೈಗುರಿ ಎಂಬ ಸ್ಥಳಕ್ಕೆ ನಾಳೆ (ಮೇ 29) ಮಧ್ಯಾಹ್ನ ಶ್ರಮಿಕ್ ರೈಲು ಪ್ರಯಾಣ ಬೆಳೆಸಲಿದೆ.

ಮೈಸೂರಿನ ಅಶೋಕಪುರಂ ರೈಲು ನಿಲ್ದಾಣ ದಿಂದ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಹೊರ ಡಲಿರುವ ರೈಲುಗಾಡಿಯಲ್ಲಿ ಸುಮಾರು 1 ಸಾವಿರ ಮಂದಿ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುವರು. ಗೋರಖ್‍ಪುರ, ಬಿಹಾರ ಸೇರಿದಂತೆ ಈವರೆಗೆ ನಾಲ್ಕು ಶ್ರಮಿಕ್ ರೈಲು ಮೈಸೂರಿನಿಂದ ವಲಸೆ ಕಾರ್ಮಿಕರನ್ನು ಕರೆದೊಯ್ದಿದ್ದು, ನಾಳೆ ಹೊರಡುವುದು 5ನೇ ರೈಲು. ಒಟ್ಟು 22 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ 1,520 ಮಂದಿ ಪ್ರಯಾ ಣಿಸಬಹುದಾದರೂ, ಮೈಸೂರಿನಿಂದ 900ರಿಂದ 1,000 ಮಂದಿ ಜಲ್‍ಪೈಗುರಿಗೆ ತೆರಳುವ ನಿರೀಕ್ಷೆ ಇದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನ ಎಲ್ಲಾ ಠಾಣೆಗಳ ಪೊಲೀಸರು, ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ತಂತಮ್ಮ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರನ್ನು ಬಸ್ಸುಗಳಲ್ಲಿ ಅಶೋಕ ಪುರಂ ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯಲಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಆರೋಗ್ಯ ತಪಾಸಣೆ ನಡೆಸಿದ ನಂತರ ಕಳುಹಿಸಿಕೊಡುವರು.