ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂದನೆ: ಯುವಕನ ವಿರುದ್ಧ ದೂರು

ಮೈಸೂರು, ಜೂ.3(ಪಿಎಂ)- ಪುನೀತ್ ಕೆರೆಹಳ್ಳಿ ಎಂಬ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವುದಾಗಿ ಆರೋಪಿಸಿ ಕಾಂಗ್ರೆಸ್‍ನ ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಪುನೀತ್ ಕೆರೆಹಳ್ಳಿ ಎಂಬಾತ 2-3 ದಿನಗಳ ಹಿಂದೆ ಸಿದ್ದ ರಾಮಯ್ಯ ಅವರ ಕುರಿತು ಫೇಸ್‍ಬುಕ್‍ನಲ್ಲಿ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದು, ಸಿದ್ದರಾಮಯ್ಯ ಅವರ ಅಭಿಮಾನಿಗಳ ಭಾವನೆಗೆ ಧಕ್ಕೆಯುಂಟು ಮಾಡಿದೆ. ಇಂತಹ ಸಮಾಜಘಾತುಕ ರನ್ನು ಕೂಡಲೇ ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ವಿಜಯ ಕುಮಾರ್, ಆರೋಪಿ ಪುನೀತ್ ಕೆರೆಹಳ್ಳಿ ಫೇಸ್‍ಬುಕ್‍ನಲ್ಲಿ ಮಾತನಾಡಿದ ವಿಡಿಯೋ ರೆಕಾರ್ಡ್‍ನ ಸಿಡಿಯನ್ನೂ ದೂರಿನ ಜೊತೆಗೆ ಪೊಲೀಸರಿಗೆ ನೀಡಲಾಗಿದೆ. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಹಿನ್ನೆಲೆಯ ಈ ಯುವಕನ ಕೆಟ್ಟ ವರ್ತನೆ ನಿರಂತರವಾಗಿದೆ. ಬಿಜೆಪಿ ಅಂಗ ಸಂಸ್ಥೆಗಳ ತಂಡ ಈ ರೀತಿ ವ್ಯವಸ್ಥಿತವಾಗಿ ಕುತಂತ್ರ ನಡೆಸುತ್ತಿವೆ. ಇಂತಹ ಪ್ರಕರಣಗಳಲ್ಲಿ ಸೈಬರ್ ಕ್ರೈಂ ಪೊಲೀಸರು ಸುಮೊಟೊ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಇದೇ ರೀತಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‍ನ ರಾಷ್ಟ್ರೀಯ ಮತ್ತು ರಾಜ್ಯದ ನಾಯಕರನ್ನು ಅಸಹ್ಯಕರವಾದ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಗೇಲಿ ಮಾಡು ತ್ತಿದ್ದಾರೆ. ಆದರೆ, ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗ ಸ್ವಯಂಪ್ರೇರಿತ ದೂರು ದಾಖಲಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ದೇವರಾಜ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನ ಕುಮಾರ್ ಅವರಿಗೆ ದೂರು ಸಲ್ಲಿಸ ಲಾಯಿತು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.