ಕುಮಾರಸ್ವಾಮಿ ಜನಮನ್ನಣೆಗಳಿಸಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮಗಳು ಜನ ಮನ್ನಣೆ ಗಳಿಸಬಾರದೆಂಬ ಏಕೈಕ ಉದ್ದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದಾಗಿದೆ ಎಂಬ ವಿಷಯವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾಂಗ್ರೆಸ್ ರಾಯಭಾರಿಯ ಕಿವಿಗೆ ಹಾಕಿದ್ದಾರೆ.

ದೆಹಲಿಯಲ್ಲಿ ನಿನ್ನೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ನಾಯಕರೊಂದಿಗೆ ನಡೆಸಿದ ಮಾತುಕತೆ ವಿವರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೆಡಿಎಸ್ ವರಿಷ್ಠರಿಗೆ ನೀಡುತ್ತಿದ್ದ ವೇಳೆ ಈ ವಿಚಾರ ಪ್ರಸ್ತಾಪ ವಾಗಿದೆ.

ರಾಷ್ಟ್ರಮಟ್ಟದಲ್ಲಿ ಎನ್‍ಡಿಎ ವಿರೋಧಿಗಳನ್ನು ಒಂದು ಮಾಡಲು ನಾವು ಹೋರಾಟ ನಡೆಸು ತ್ತಿದ್ದರೆ, ನೀವಿಲ್ಲಿ ನಮ್ಮ ನಾಯಕತ್ವದ ವಿರುದ್ಧವೇ ಅಪಸ್ವರ ಎತ್ತುತ್ತಿದ್ದೀರಿ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನ ದಿಂದಲೂ ಕುಮಾರಸ್ವಾಮಿ ಅವರನ್ನು ಸಹಿಸಿಕೊಳ್ಳುತ್ತಲೇ ಇಲ್ಲ. ಮೊದ ಮೊದಲು, ಅವರೇ ಸಾರ್ವಜನಿಕವಾಗಿ ಕೆಂಡ ಕಾರುತ್ತಿದ್ದರು, ನಂತರದ ದಿನಗಳಲ್ಲಿ ಪದೇ ಪದೆ ಆಪರೇಷನ್ ಕಮಲಕ್ಕೆ ತಮ್ಮ ಬೆಂಬಲಿಗರಿಂದ ಪರೋಕ್ಷ ಕುಮ್ಮಕ್ಕು ನೀಡು ತ್ತಿದ್ದಾರೆ. ಒಂದೆಡೆ ಭಿನ್ನಮತ ಶಾಂತವಾಗುತ್ತಿದ್ದರೆ, ಮತ್ತೊಂದೆಡೆ ತಮ್ಮ ಬೆಂಬಲಿಗರಿಂದ ಸರ್ಕಾರವನ್ನೇ ಸಾರ್ವಜನಿಕವಾಗಿ ಟೀಕೆಗೆ ಗುರಿ ಮಾಡಿಸುತ್ತಾರೆ. ಅರ್ಧ ಶತಮಾನದಿಂದ ನಾನೂ ಸಕ್ರಿಯ ರಾಜ ಕಾರಣದಲ್ಲಿದ್ದೇನೆ, ನನಗೂ ಎಲ್ಲ ರಾಜಕೀಯ ಮರ್ಮಗಳು ತಿಳಿಯುತ್ತೆ.

ಸಿದ್ದರಾಮಯ್ಯ ಅವರಿಗೆ ಮೈತ್ರಿ ಸರ್ಕಾರ ಇಷ್ಟ ಇಲ್ಲವೆಂದರೆ ಪರ್ಯಾಯ ದಾರಿ ಆಲೋಚಿಸಲಿ. ಅದು ಬಿಟ್ಟು ಕುಮಾರ ಸ್ವಾಮಿ ಸರ್ಕಾರ ಮಾಡುತ್ತಿರುವ ಜನಪರ ಯೋಜ ನೆಗಳಿಗೆ ಅಡ್ಡಿ ಮಾಡುವುದು ಸರಿಯಲ್ಲ. ಇದನ್ನು ನೀವು ಹೈಕಮಾಂಡ್ ಗಮನಕ್ಕೆ ತರಬೇಕು. ನನ್ನ ತಾಳ್ಮೆಯ ಕಟ್ಟೆ ಒಡೆದಿದ್ದರಿಂದ ಸಾರ್ವಜನಿಕವಾಗಿ ಪ್ರತಿಕ್ರಿಯಿಸ ಬೇಕಾಯಿತು ಎಂದು ತಿಳಿಸಿದ್ದಾರೆ. ಗೌಡರ ಮಾತಿಗೆ ವೇಣುಗೋಪಾಲ್, ಮುಂದೆ ಇಂತಹ ಪರಿಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.