ಕಾವೇರಿ ಸಂಬಂಧ ಸರ್ವಪಕ್ಷ ಸಭೆಗೆ ಸಿದ್ದರಾಮಯ್ಯ ಗೈರು

ಬೆಂಗಳೂರು: ಕಾವೇರಿ ನದಿ ನೀರು ಸಮಸ್ಯೆ ಕುರಿತು ಇಂದು ಕರೆದಿದ್ದ ಸರ್ವಪಕ್ಷ ಸಭೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿದಿದ್ದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಸರ್ಕಾರ ಅಧಿಕೃತವಾಗಿ ಆಹ್ವಾನ ನೀಡಿತ್ತು. ಅಷ್ಟೇ ಅಲ್ಲ ಕಾವೇರಿ ಜಲಾನಯನ ಭಾಗದ ಪ್ರಮುಖ ಮುಖಂಡರು ಕೂಡ.

ಸಭೆಯಲ್ಲಿ ಕಾವೇರಿ ಕೊಳ್ಳದ ಶಾಸಕರು, ಸಂಸದರು ಭಾಗವಹಿಸಿದ್ದರು. ಆದರೆ, ಸಭೆಗೆ ಹಾಜರಾಗದ ಸಿದ್ದರಾಮಯ್ಯನವರು ಮನೆಯಲ್ಲೇ ಉಳಿದಿದ್ದರು. ಸಿದ್ದರಾಮಯ್ಯ ಈಗ ಬಾದಾಮಿ ಕ್ಷೇತ್ರದ ಶಾಸಕ. ಒಂದೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರೆ ಆಗ ಕಾವೇರಿ ಕೊಳ್ಳದ ಶಾಸಕರಾಗಿರುತ್ತಿದ್ದರು. ಇದೇ ಕಾರಣಕ್ಕೆ ಸಭೆಯಿಂದ ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯನವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮಾತ್ರಕ್ಕೆ ಆ ಭಾಗದ ಸಮಸ್ಯೆ ಬಗ್ಗೆ ಗಮನಹರಿಸುವುದನ್ನು ಬಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಸಂಪುಟ ವಿಸ್ತರಣೆ ನಂತರ ಭಿನ್ನಮತದ ನಾಯಕತ್ವ ವಹಿಸಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಸಿದ್ದರಾಮಯ್ಯ ಸಮಾಲೋಚನೆ ಮಾಡುತ್ತಿದ್ದರು.