ವರುಣಾದಲ್ಲಿ ಸಿದ್ದು ವಿರುದ್ಧ ಸೋಮಣ್ಣ?

ಮೈಸೂರು, ಏ.4(ಆರ್‍ಕೆ)- ಪ್ರತಿಷ್ಠಿತ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಕಣ ಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆದ ಬಿ.ವೈ. ವಿಜಯೇಂದ್ರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ, ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧಿ ಸುವುದಾಗಿ ಸ್ಪಷ್ಟಪಡಿಸಿದ್ದರು. ವರುಣಾದಲ್ಲಿ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ವಿಜಯೇಂದ್ರ ಹೇಳಿದ್ದರು. ವಿಜಯೇಂದ್ರ ಶಿಕಾರಿಪುರ ಹಾಗೂ ವರುಣಾ, ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವ ಕಾಶ ಕೇಳಿದ್ದಾರೆಂಬ ಮಾತುಗಳೂ ಕೇಳಿಬಂದಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆಯೇ ಬಿಜೆಪಿ ಹೈಕಮಾಂಡ್ ಮತ್ತೋರ್ವ ಲಿಂಗಾಯತ ಪ್ರಭಾವಿ ನಾಯಕರಾದ, ವಸತಿ ಸಚಿವ ವಿ.ಸೋಮಣ್ಣ ಅವರನ್ನು ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗು ತ್ತಿದೆ. ಇದನ್ನು ಪುಷ್ಠೀಕರಿಸುವ ಚರ್ಚೆಗಳೂ ಆರಂಭವಾ ಗಿವೆ. ವರುಣಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಅನು ಕೂಲವಾಗುವಂತೆ ಸೋಮಣ್ಣ, ಕ್ಷೇತ್ರದಲ್ಲೇ ಸೂಕ್ತ ಮನೆಗೆ ಹುಡುಕಾಟ ನಡೆಸುತ್ತಿದ್ದಾರೆ ಎಂಬ ವದಂತಿಗಳೂ ಕೇಳಿ ಬರುತ್ತಿವೆ. 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸೋಮಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾ ಗಿದ್ದರು. ಕೊರೊನಾ ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಕೆಲ ವಿವಾದಗಳು ಸೃಷ್ಟಿಯಾದ ಕಾರಣ 2020ರ ಏಪ್ರಿಲ್‍ನಲ್ಲಿ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸ್ಥಳಾಂತರಿಸಲಾಗಿತ್ತು. ಸೋಮಣ್ಣ ಅಲ್ಲಿ ಪಕ್ಷ ಸಂಘಟನೆ ಜೊತೆಗೆ ವೈಯಕ್ತಿಕ ಪ್ರಾಬಲ್ಯವನ್ನೂ ಹೆಚ್ಚಿಸಿಕೊಂಡರು. ನಾಲ್ಕು ದಶಕಗಳ ರಾಜಕೀಯ ಅನುಭವವಿರುವ ಸೋಮಣ್ಣ, ವರುಣಾ ಕ್ಷೇತ್ರದ ಬಗ್ಗೆಯೂ ಚೆನ್ನಾಗಿ ಅರಿತಿದ್ದಾರೆ. ಅಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚಿರುವ ಕಾರಣ ಜಾತಿ ಸಮೀಕರಣದಲ್ಲಿ ಪರಿಣಿತರಾಗಿರುವ ಸೋಮಣ್ಣನವರು ಸಿದ್ಧರಾಮಯ್ಯನವರಿಗೆ ಪ್ರಬಲ ಪೈಪೋಟಿ ನೀಡಬಲ್ಲರು ಎನ್ನುವ ಲೆಕ್ಕಾಚಾರ ಬಿಜೆಪಿ ಕೇಂದ್ರ ನಾಯಕರಲ್ಲಿದೆ. ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ಸಿದ್ದರಾಮಯ್ಯನವರನ್ನು ಮಣಿಸಲು ರಣತಂತ್ರ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ. ವರುಣಾದಲ್ಲಿ 2008 ಮತ್ತು 2013ರಲ್ಲಿ ಎರಡು ಬಾರಿ ಸಿದ್ದರಾಮಯ್ಯ ಭರ್ಜರಿ ಜಯ ಗಳಿಸಿದ್ದರೆ, 2018ರಲ್ಲಿ ಅವರ ಪುತ್ರ ಡಾ.ಯತೀಂದ್ರ ಆಯ್ಕೆಯಾಗಿದ್ದಾರೆ. ಹಾಗಾಗಿ ವರುಣಾ, ಕಾಂಗ್ರೆಸ್ ಭದ್ರಕೋಟೆ ಎನಿಸಿದೆ. ಸೋಮಣ್ಣ ಪ್ರಸ್ತುತ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಬಿಜೆಪಿ ಹೈಮಾಂಡ್ ಲೆಕ್ಕಾಚಾರದಂತೆ ವರುಣಾ ಅಖಾಡಕ್ಕೆ ಇಳಿಯುತ್ತಾರಾ ಅಥವಾ ಈಗಿರುವ ಕ್ಷೇತ್ರದಲ್ಲೇ ಸ್ಪರ್ಧಿಸಲಿದ್ದಾರಾ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ಸೋಮಣ್ಣ ಸ್ಪಷ್ಟನೆಗೆ ಪ್ರಯತ್ನಿಸಲಾಯಿತಾದರೂ ಅವರ ಸಂಪರ್ಕ ಸಾಧ್ಯವಾಗಲಿಲ್ಲ.

2018ರ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಮನೆ ಮಾಡಿ, 20ಕ್ಕೂ ಹೆಚ್ಚು ದಿನಗಳ ಕಾಲ ಭಾರೀ ಪ್ರಚಾರ ನಡೆಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ವಿಜಯೇಂದ್ರ ಅವರಿಗೆ ಅವಕಾಶ ಸಿಗಲಿಲ್ಲ. ಆಗ ಡಾ.ಯತೀಂದ್ರ ವಿರುದ್ಧ ಬಿಜೆಪಿಯಿಂದ ಟಿ.ಬಸವರಾಜ್ ಅವರನ್ನು ಕಣಕ್ಕಿಳಿಸಲಾಗಿತ್ತು.