ಪ್ರಧಾನಿ ಮೋದಿ ಹೆದ್ದಾರಿಯಾದ್ದರಿಂದ ನಾನೇ ಇದರ ಬ್ರಾಂಡ್ ಅಂಬಾಸಡರ್

ಮೈಸೂರು, ಸೆ.3-ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆಯೇ, ಕಳಪೆ ಕಾಮಗಾರಿ ನಡೆದಿದೆಯೇ ಎಂಬುದರ ಬಗ್ಗೆ ಕೂಲಂಕುಷ ವಾಗಿ ತನಿಖೆ ನಡೆಸಲು ಮಾಗಡಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಲೋಕೋಪ ಯೋಗಿ ಇಲಾಖೆಯ ಮಾಜಿ ಸಚಿವ ರೇವಣ್ಣ ಒಳಗೊಂಡ ಸಮಿತಿ ರಚಿ ಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಭೂ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡುತ್ತಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿ ದ್ದಾರೆ. ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆರೋಪಗಳ ಸುರಿಮಳೆಗೈದು, ಮಾಗಡಿ ಶಾಸಕ ಮಂಜುನಾಥ್ ನಡೆಸಿದ ಪತ್ರಿಕಾ ಗೋಷ್ಠಿಗೆ ಪ್ರತಿಕ್ರಿಯಿಸಿದ ‘ಪ್ರತಾಪ್ ಸಿಂಹ, ಬೆಂಗಳೂರು ಮತ್ತು ಮೈಸೂರು ನಡುವೆ ಅತ್ಯುತ್ತಮವಾದ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಇದು ಪ್ರಧಾನಿ ಮೋದಿ ಅವರ ಹೆದ್ದಾರಿಯಾಗಿದೆ. ಮೈಸೂರಿಗೆ ಉದ್ಯಮಗಳನ್ನು ತರಲು ಹಾಗೂ ಮಂಡ್ಯ, ಮದ್ದೂರು ಹಾಗೂ ರಾಮನಗರ ಅಭಿವೃದ್ಧಿಗಾಗಿ ನಾನು ಈ ಹೆದ್ದಾರಿಯ ಬ್ರಾಂಡ್ ಅಂಬಾಸಡರ್ ಆಗಿದ್ದೇನೆ ಎಂದು ತಿರುಗೇಟು ನೀಡಿದರು.

ಭೂ ಸ್ವಾಧೀನಕ್ಕೆ ಸಂಬಂಧಿಸಿದ ಆರೋಪಕ್ಕೆ ಉತ್ತರಿಸಿದ ಅವರು, ವಿಶೇಷ ಭೂ ಸ್ವಾಧೀನಾಧಿಕಾರಿಯು ಕರ್ನಾಟಕ ಸರ್ಕಾರದ ಅಧಿಕಾರಿಯಾಗಿರುತ್ತಾರೆ. ಅವರು ನಿಗದಿಪಡಿಸಿದ ದರವನ್ನು ಭೂಮಿ ಕಳೆದುಕೊಂಡ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಹಸ್ತಕ್ಷೇಪ ಇರುವುದಿಲ್ಲ. ಯಾರಾದರೂ ರೈತರಿಗೆ ಪರಿಹಾರ ವಿಚಾರದಲ್ಲಿ ಆಕ್ಷೇಪಣೆ ಇದ್ದರೆ ಅವರು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲೂ ಅವಕಾಶವಿದೆ ಎಂದರು. ಈ ಯೋಜನೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು 6 ತಿಂಗಳ ಹಿಂದೆಯೇ ಶಾಸಕ ಮಂಜುನಾಥ್ ಆರೋಪಿಸಿದ್ದರು. ನಿಜಕ್ಕೂ ಭ್ರಷ್ಟಾಚಾರ ನಡೆದಿದ್ದರೆ ಅಲ್ಲಿ ನಷ್ಟವಾಗುವುದು ಸಾರ್ವಜನಿಕರ ಹಣವಲ್ಲವೇ? ಹಾಗಿರುವಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮನೆಯಲ್ಲಿಟ್ಟುಕೊಂಡು ಅವರು ಪೂಜಿಸುತ್ತಿದ್ದಾರಾ? ಎಂದು ಪ್ರಶ್ನಿಸಿದರಲ್ಲದೆ, ಸಾರ್ವಜನಿಕರ ಹಣ ಭ್ರಷ್ಟರ ಪಾಲಾಗಬಾರದು ಎಂಬುದು ಅವರ ನಿಲುವಾಗಿದ್ದರೆ ದಾಖಲೆಗಳನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇನ್ನು ಬಿಡದಿಗೆ ಬರುವಂತೆ ನನಗೆ ಸವಾಲೆಸೆದಿದ್ದಾರೆ. ಅವರು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿದರೆ ಆ ಸಮಯಕ್ಕೆ ಸರಿಯಾಗಿ ನಾನು ಒಬ್ಬನೇ ಬಿಡದಿಗೆ ಬರುತ್ತೇನೆ ಎಂದು ಹೇಳುವ ಮೂಲಕ ಅವರ ಸವಾಲನ್ನು ಸ್ವೀಕರಿಸಿದರು.

2018ರ ಮೇ ತಿಂಗಳಿನಿಂದ 2019ರ ಜುಲೈವರೆಗೆ ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಗಳಾಗಿ, ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದರು. ಆಗ ರಾಮನಗರದ ಶಾಸಕರೂ ಆಗಿದ್ದ ಕುಮಾರಸ್ವಾಮಿ ಅವರು ಈ ಕಾಮಗಾರಿ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದರು. ಅದರಲ್ಲಿ ರೇವಣ್ಣ ಸಹ ಉಪಸ್ಥಿತರಿದ್ದರು. ಆಗ ಅವರಿಗೆ ಕಾಣದೇ ಇದ್ದ ಅವೈಜ್ಞಾನಿಕತೆ ವಿಧಾನಸಭಾ ಚುನಾವಣೆ ಕೇವಲ 6 ತಿಂಗಳು ಇರುವಾಗ ಗೋಚರಿ ಸಿತೇ? ಅಂಡರ್‍ಪಾಸ್ ಮತ್ತು ಇಂಟರ್ ಜಂಕ್ಷನ್‍ಗಳು ಈಗ ಕಾಣಿಸುತ್ತಿವೆಯೇ? ರಾಮದೇವರ ಗುಡ್ಡ ಪ್ರದೇಶದಲ್ಲಿ ಕಳೆದ 30 ವರ್ಷಗಳಲ್ಲಿ ಈಗ ಸುರಿದಷ್ಟು ಮಳೆ ಸುರಿದಿದೆಯೇ ಎಂಬುದನ್ನು ಶಾಸಕ ಮಂಜುನಾಥ್ ಹೇಳಲಿ ಎಂದು ಸವಾಲೆಸೆದರು.

ವಿಧಾನಸಭೆಯಲ್ಲಿ ಚರ್ಚಿಸಲು ವಿಧಾನಸಭಾಧ್ಯಕ್ಷರು ಅವಕಾಶ ನೀಡಿಲ್ಲ. ಅವರನ್ನು ಪ್ರತಾಪ್ ಸಿಂಹ ಅಡ್ಜಸ್ಟ್ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸಂಸದರು, ವಿಧಾನಸಭೆಯಲ್ಲಿ ಯಾವುದೇ ವಿಷಯದ ಚರ್ಚೆ ನಡೆಯದಂತೆ ಪ್ರಭಾವ ಬೀರಲು ನಾನೇನೂ ಶಾಸಕನಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಹೆದ್ದಾರಿ ಬಗ್ಗೆಯೇ ವಿಷಯವನ್ನು ಪ್ರಸ್ತಾಪಿಸಿ ಚರ್ಚಿಸಬಹುದಿತ್ತಲ್ಲವೇ? ಆಗ ಅವರದೇ ಸರ್ಕಾರ. ಅವರದೇ ವಿಧಾನಸಭಾಧ್ಯಕ್ಷರು ಇದ್ದರಲ್ಲವೇ? ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿಯವರ ಹೆದ್ದಾರಿಯಾಗಿರುವ ಮೈಸೂರು-ಬೆಂಗಳೂರು ಹೆದ್ದಾರಿಗೆ ನಾನು ಬ್ರಾಂಡ್ ಅಂಬಾಸಡರ್‍ನಂತೆ ಕೆಲಸ ಮಾಡುತ್ತಿರುವುದರಿಂದಲೇ ಕಾಲಮಿತಿಯೊಳಗೆ ಈ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎಂದರು.

ಇದು ಪ್ರವೇಶ ನಿಯಂತ್ರಿತ ಎಕ್ಸ್‍ಪ್ರೆಸ್ ಹೈವೇ ಆಗಿದ್ದು, ಈ ರಸ್ತೆಯಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿರುವಂತೆ ಹಾದಿ ಬೀದಿ ಡಾಬಾ, ಹೋಟೆಲ್‍ಗಳಿಗೆ ಅವಕಾಶವಿಲ್ಲ. ಈ ರಸ್ತೆಯಲ್ಲಿ ಕೆಫೆಟೇರಿಯನ್, ಪೆಟ್ರೋಲ್ ಬಂಕ್, ಟ್ರಾಮಾ ಸೆಂಟರ್, ಪ್ರತ್ಯೇಕ ರೆಸ್ಟ್ ಏರಿಯಾ ಎಲ್ಲವೂ ಬರುತ್ತದೆ. ಶಾಸಕ ಮಂಜುನಾಥ್ ಮತ್ತು ಬೆಂಬಲಿಗರು ಮಾಡಿಕೊಂಡ ಲೇಔಟ್‍ಗಳಿಗೆ ಈ ರಸ್ತೆಯಲ್ಲಿ ಪ್ರವೇಶ ಹಾಗೂ ನಿರ್ಗಮನ ನೀಡುವುದಿಲ್ಲ. ಕಮಿಷನ್ ತೆಗೆದುಕೊಳ್ಳುವರು ಯಾರು? ಕಾಂಟ್ರಾಕ್ಟ್ ಮಾಡಿಸಿರುವವರು ಯಾರು? ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವವರು ಯಾರು? ಎಂಬುದು ಮಾಗಡಿ ಹಾಗೂ ಕರ್ನಾಟಕದ ಜನತೆಗೆ ಗೊತ್ತಿದೆ. ರಾಜ್ಯದಲ್ಲೇ ಪ್ರಪ್ರಥಮವಾಗಿ ಪ್ರವೇಶ ನಿಯಂತ್ರಿತ ಎಕ್ಸ್‍ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿರುವಾಗ ಅದಕ್ಕೆ ಸಹಕಾರವನ್ನು ನೀಡುವುದನ್ನು ಬಿಟ್ಟು ಹೀಗೆ ಆರೋಪದಲ್ಲಿ ತೊಡಗಿರುವವರನ್ನು ನೋಡಿದರೆ ನನಗೆ ಮಾತ್ರವಲ್ಲ, ರಾಜ್ಯದ ಜನತೆಗೂ ಅವರ ಬಗ್ಗೆ ಅನುಮಾನ ಕಾಡುತ್ತಿದೆ ಎಂದರು.