- ಒಟ್ಟು 16 ಹುಲಿಗಳ 1 ದಿನದ ಆಹಾರದ ವೆಚ್ಚಕ್ಕೆ ದೇಣಿಗೆ
- ಮೃಗಾಲಯದಲ್ಲಿ 1 ಗಂಟೆ ಸುತ್ತಾಟ; ಸ್ವಚ್ಛತೆಗೆ ಮೆಚ್ಚುಗೆ
ಮೈಸೂರು,ಏ.22(ಎಂಟಿವೈ)- ನೊವೆಲ್ ಕೊರೊನಾ ಹಾಗೂ ಹಕ್ಕಿಜ್ವರ ಭೀತಿ ಹಿನ್ನೆಲೆ ಯಲ್ಲಿ ಮೈಸೂರಿನ ಮೃಗಾಲಯದಲ್ಲಿ ಕೈ ಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಮೃಗಾ ಲಯದಲ್ಲಿ 1 ಗಂಟೆ ಕಾಲ ಸುತ್ತಾಡಿದರು. ಈ ವೇಳೆ 5 ವರ್ಷದ ಹೆಣ್ಣಾನೆ `ಚಾಮುಂಡಿ’ ಯನ್ನು ಸಚಿವರು 1 ವರ್ಷ ಅವಧಿಗೆ ದತ್ತು ಪಡೆದರು. 16 ಹುಲಿಗಳಿಗೆ 1 ದಿನದ ಆಹಾರ ಒದಗಿಸಲು ದೇಣಿಗೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಶ್ರೀ ಚಾಮರಾಜೇಂದ್ರ ಮೃಗಾ ಲಯಕ್ಕೆ ಭೇಟಿ ನೀಡಿದ ಸೋಮಶೇಖರ್, ಮಧ್ಯಾಹ್ನ 2.30ರಿಂದ ಬ್ಯಾಟರಿ ಚಾಲಿತ ವಾಹನದಲ್ಲಿ 1 ಗಂಟೆ ಸುತ್ತಾಡಿ ಪ್ರಾಣಿ-ಪಕ್ಷಿಗಳ ಸ್ಥಿತಿಗತಿ ಅವಲೋಕಿಸಿದರು. ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಪ್ರಾಣಿ-ಪಕ್ಷಿಗಳ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವರಿಗೆ ವಿವರಿಸಿದರು.
ದತ್ತು ಆಸೆ: ಆನೆಗಳಿದ್ದೆಡೆಗೆ ತೆರಳಿದ ಸಚಿವರಿಗೆ 5 ವರ್ಷದ ಹೆಣ್ಣಾನೆ `ಚಾಮುಂಡಿ’ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿದರು. ಬಂಡೀಪುರ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 1 ತಿಂಗಳಿನ ಮರಿಯನ್ನು ಮೃಗಾ ಲಯಕ್ಕೆ ತಂದು ಆರೈಕೆ ಮಾಡುತ್ತಿರುವು ದಾಗಿ ಮಾಹಿತಿ ನೀಡಿದರು. `ಚಾಮುಂಡಿ’ ಪಾಲಕ ರೊಂದಿಗೆ ಬೆರೆಯುವ, ಅವರ ಮಾತನ್ನು ಚಾಚೂತಪ್ಪದೆ ಕೇಳುವುದನ್ನು ತಿಳಿದು ಹರ್ಷ ಗೊಂಡ ಸಚಿವರು 1 ವರ್ಷದ ಅವಧಿಗೆ 1.75 ಲಕ್ಷ ರೂ. ಪಾವತಿಸಿ ದತ್ತು ಪಡೆದರು.
ಇನ್ನು ಇಂದಿನಿಂದ 2021ರ ಏ.21 ರವರೆಗೂ ಸಚಿವ ಎಸ್.ಟಿ.ಸೋಮ ಶೇಖರ್ ಅವರ ಹೆಸರಲ್ಲಿಯೇ ಚಾಮುಂಡಿ ಆನೆಯ ಪಾಲನೆಯಾಗುತ್ತದೆ. ಬಳಿಕ ಮೃಗಾ ಲಯದಲ್ಲಿ 8 ಹಾಗೂ ಕೂರ್ಗಳ್ಳಿಯಲ್ಲಿನ ಚಾಮುಂಡಿ ರೆಸ್ಕ್ಯೂ ಸೆಂಟರ್‍ನಲ್ಲಿರುವ 8 ಹುಲಿಗಳಿಗೆ ಒಂದು ದಿನದ ಆಹಾರದ ವೆಚ್ಚವನ್ನು (25 ಸಾವಿರ ರೂ.) ನೀಡುವ ಮೂಲಕ ಸಚಿವರು ತಮಗೆ ಪ್ರಾಣಿಗಳ ಮೇಲಿರುವ ಕಾಳಜಿಯನ್ನು ಪ್ರದರ್ಶಿಸಿದರು.
ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಚಿವರು, ಕೊರೊನಾ ವೈರಾಣು ಹರಡುವುದನ್ನು ತಡೆಯಲು ಕೈಗೊಂಡಿ ರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಮೃಗಾ ಲಯಕ್ಕೆ ತೆರಳಿದ್ದೆ. ಕೊರೊನಾ ಸಂದರ್ಭ ದಲ್ಲಿ ಮಾತ್ರವಲ್ಲದೆ, ಮೃಗಾಲಯದ ಪ್ರಾಣಿ-ಪಕ್ಷಿಗಳ ಹಿತಕಾಯಲು ಇಲ್ಲಿನ ಆಡಳಿತ ಹಲವು ಕ್ರಮವನ್ನು ಅನುಸರಿಸುತ್ತಾ ಬಂದಿದೆ. ರಾಸಾಯನಿಕ ಸಿಂಪಡಣೆ ನಡೆದಿದೆ. ಎಲ್ಲೆಡೆ ಸ್ವಚ್ಛತೆ ಕಾಪಾಡಿದ್ದಾರೆ. ಮೃಗಾಲ ಯಕ್ಕೆ ಬರುವ ಸಿಬ್ಬಂದಿಗೆ ಸ್ಯಾನಿಟೈಸರ್, ಮಾಸ್ಕ್ ನೀಡಿ ಅಂತರ ಕಾಯ್ದುಕೊಳ್ಳಲೂ ಕ್ರಮ ಕೈಗೊಂಡಿದ್ದಾರೆ. ಆಹಾರ ಹೊತ್ತು ತರುವ ವಾಹನಗಳಿಗೂ ತಪ್ಪದೇ ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೊರೊನಾ ಮೃಗಾಲಯಕ್ಕೆ ಹರಡದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ. ಜನರು ಆತಂಕ ಪಡಬೇಕಿಲ್ಲ ಎಂದರು.
ಈ ಸಂದರ್ಭ ಶಾಸಕ ಎಸ್.ಎ.ರಾಮ ದಾಸ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಪಂ ಸಿಇಓ ರವಿಕುಮಾರ್, ಮೃಗಾಲ ಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಹಾಜರಿದ್ದರು.
ಮೊದಲಿಂದಲೂ ಆನೆ ದತ್ತು ಪಡೆಯಬೇಕೆಂಬ ಆಸೆಯಿತ್ತು. ಈಗ ಮೈಸೂರಿನ ಮೃಗಾಲಯದ `ಚಾಮುಂಡಿ’ ಆನೆಯನ್ನು 1 ವರ್ಷ ದತ್ತು ಪಡೆಯುವುದರೊಂದಿಗೆ ನನ್ನ ಆಸೆ ಈಡೇರಿದೆ. ಮೇ3ರ ನಂತರ ಇನ್ನಷ್ಟು ಪ್ರಾಣಿ-ಪಕ್ಷಿ ದತ್ತು ಪಡೆಯುವೆ.
– ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ