ಸೋನಿಯಾ ಗಾಂಧಿ ಸಂಸದರು, ಸರ್ಕಾರದ ಕ್ರಮ ಖಂಡಿಸುವ ಹಕ್ಕಿದೆ

ಮೈಸೂರು,ಮೇ23(ಪಿಎಂ)-ಸಂಸದರಾಗಿರುವ ಸೋನಿಯಾ ಗಾಂಧಿ ಅವರು `ಪಿಎಂ ಕೇರ್ಸ್ ಫಂಡ್’ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿ ದ್ದಾರೆ. ಹಾಗಾಗಿ ಅವರ ಹೇಳಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಕ್ಷೇಪಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಠಾಣೆ ಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್ ದಾಖಲಾಗಿರುವ ಸಂಬಂಧ ಮೈಸೂರಿನ ಜಲ ದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಮಾಧ್ಯಮದ ವರಿಗೆ ಪ್ರತಿಕ್ರಿಯೆ ನೀಡಿದ ಧ್ರುವನಾರಾಯಣ್, ಯುಪಿಎ ಒಕ್ಕೂಟದ ನಾಯಕಿಯೂ ಆಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆ ಸದಸ್ಯೆಯೂ ಹೌದು. ಹಾಗಾಗಿ ಅವರಿಗೆ ಪಿಎಂ ಕೇರ್ಸ್ ಫಂಡ್ ವಿಚಾರ ಪ್ರಶ್ನಿಸುವ, ಅಭಿಪ್ರಾಯ ವ್ಯಕ್ತಪಡಿ ಸುವ ಹಕ್ಕು ಇದೆ ಎಂದು ಸಮರ್ಥಿಸಿಕೊಂಡರು.

ಚಾಮರಾಜನಗರದಲ್ಲಿ ಕೆಲ ಯುವಕರು ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜಯಂತಿ ಆಚರಿಸಿದ್ದು, ಅವರ ವಿರುದ್ಧ ಯುವ ಕಾಂಗ್ರೆಸ್ ಮುಖಂ ಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೇ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ, ಏನೂ ಕ್ರಮ ಕೈಗೊಳ್ಳುವುದಿಲ್ಲ ಎಂದರೆ ಏನರ್ಥ? ಎಂದು ಕಿಡಿಕಾರಿ ದರು. ಕೊರೊನಾ ಹಾವಳಿ ವೇಳೆ ಸರ್ಕಾರವನ್ನು ಟೀಕಿಸುವುದಕ್ಕಿಂತ ಸಹಕಾರ ಕೊಡುವುದು ಮುಖ್ಯ ಎಂಬುದು ಸರಿ. ಆದರೆ ವಾಸ್ತವಾಂಶ ತಿಳಿಸದೇ ವಿಧಿ ಯಿಲ್ಲ. ವಿದೇಶದಿಂದ ಬಂದವರಿಂದ ಸೋಂಕು ಹರಡಿ ರುವುದು ಸ್ಪಷ್ಟ. ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಾ ಗಲೇ ಹೆಚ್ಚು ಮುನ್ನೆಚ್ಚರಿಕೆ ವಹಿಸ ಬೇಕಿತ್ತು. ದೇಶದ ಏರ್‍ಪೋರ್ಟ್‍ಗಳಲ್ಲಿ ಬಿಗಿಕ್ರಮ ಜರುಗಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಹಾಗೆ ಮಾಡಲಿಲ್ಲ. ದಕ್ಷಿಣ ಕೊರಿಯಾ ಮತ್ತಿತರ ದೇಶಗಳಲ್ಲಿ ಆರಂಭದಲ್ಲೇ ಬಿಗಿ ಕ್ರಮ ಕೈಗೊಂಡಿದ್ದರಿಂದ ಅಲ್ಲೆಲ್ಲಾ ಲಾಕ್‍ಡೌನ್ ಅಗತ್ಯ ಬರಲಿಲ್ಲ. ಅವರು ವಿದೇಶದಿಂದ ಬಂದವರನ್ನು ಏರ್ ಪೋರ್ಟ್‍ನಲ್ಲೇ ತಪಾಸಣೆಗೊಳಪಡಿಸಿ ಕ್ವಾರಂಟೈನ್ ನಲ್ಲಿರಿಸಿ ಸೋಂಕು ಹರಡದಂತೆ ತಡೆದರು. ನಮ್ಮಲ್ಲಿ ಇಂತಹುದು ನಡೆಯಲಿಲ್ಲ ಎಂದು ಟೀಕಿಸಿದರು.

ಬೇಜವಾಬ್ದಾರಿ ಹೇಳಿಕೆ: ಕೊರೊನಾ ಹರಡಿದ ವಿಚಾರದಲ್ಲಿ ತಬ್ಲಿಘಿ ಜಮಾತ್ ಮೇಲೆ ಆರೋಪ ಮಾಡುತ್ತಾರೆ. ದೆಹಲಿಯಲ್ಲಿ ಅವರ ನಡೆಸಿದ ಧಾರ್ಮಿಕ ಸಮ್ಮೇಳನ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದರೆ ಕೊರೊನಾ ಹರಡಿದ ನಂಜನಗೂಡಿನ ಜುಬಿಲಂಟ್ ಕಾರ್ಖಾನೆ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಮಾಜಿ ಸಂಸದ ಆಕ್ಷೇಪ ವ್ಯಕ್ತಪಡಿಸಿದರು. ಜುಬಿಲಂಟ್‍ನ ಕೊರೊನಾ ಪ್ರಕರಣದಲ್ಲಿ ಕಿಕ್ ಬ್ಯಾಕ್ ಸಿಗದಿದ್ದಕ್ಕೇ ಮಾಜಿ ಸಂಸದರು ಸರ್ಕಾರದ ವಿರುದ್ಧ ಕಿಕ್‍ಬ್ಯಾಕ್ ಆರೋಪ ಮಾಡಿದ್ದಾರೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ್, ಸರಿಯಾಗಿ ತನಿಖೆ ನಡೆಸಲಾಗದ ಜಿಲ್ಲಾ ಉಸ್ತುವಾರಿ ಸಚಿವರು ಬೇಜವಾ ಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.

ದೇಶದ ಸಂಸ್ಕøತಿಯ `ನಮಸ್ಕಾರ’ ಈಗ ಮುನ್ನಲೆಗೆ ಬಂದಿದೆ. ಫೆಬ್ರುವರಿಯಲ್ಲಿ ಅಮೆರಿಕ ಅಧ್ಯಕ್ಷರ ಬೃಹತ್ ಕಾರ್ಯಕ್ರಮ ನಡೆಸಿದಾಗ ಅಲ್ಲಿ ನಮಸ್ಕಾರ ಇರಲಿಲ್ಲ, ಎಲ್ಲ ಅಪ್ಪುಗೆಯೇ ಇತ್ತು. ಹೆಸರು ಗಳಿಸಲು ಮೋದಿಯವರು ಅಧಿಕ ಮುಖಬೆಲೆ ನೋಟು ಅಪಮೌಲ್ಯೀಕರಣ ಮಾಡಿ ದೇಶದ ಆರ್ಥಿಕತೆಯನ್ನೇ ಹಾಳುಗೆಡವಿದರು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಹೇಳಿದಂತೆ, ಅಪಮೌಲ್ಯೀಕರಣ ದಿಂದ ಶೇ.2ರಷ್ಟು ಜಿಡಿಪಿ ಕುಸಿದಿದೆ. ಜಿಎಸ್‍ಟಿ ಸರಿಯಾದ ರೀತಿ ಜಾರಿಗೊಳಿಸದಿದ್ದರಿಂದಲೂ ಆರ್ಥಿಕತೆಗೆ ಪೆಟ್ಟು ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.

ಈಗ ವಿವಿಧ ರಾಜ್ಯಗಳಿಂದ ತವರಿಗೆ ಮರಳುತ್ತಿ ರುವ ವಲಸೆ ಕಾರ್ಮಿಕರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಉದ್ಯೋಗ ಕೊಡುವಂತಾಗಿದೆ. ಈ ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರ 40 ಸಾವಿರ ಕೋಟಿ ರೂ. ಬಿಡುಗಡೆ ಮಾಡಿರುವುದು ಅಭಿನಂದನಾರ್ಹ. ಕಾರ್ಮಿಕರ ವಲಸೆ ತಡೆ ಉದ್ದೇಶದಿಂದಲೇ ಯುಪಿಎ ಸರ್ಕಾರ ಈ ಯೋಜನೆ ಜಾರಿಗೆ ತಂದಿತು ಎಂದು ನೆನಪಿಸಿದರು.

ಗ್ರಾಪಂಗಳಿಗೆ ಸಮಿತಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಂಸದರು, ಅವಧಿ ಮುಗಿದ ಮೇಲೆ ಆಡಳಿತಾಧಿಕಾರಿ ನೇಮಿಸಲು ಅಥವಾ ಹಾಲಿ ಸದಸ್ಯರನ್ನೇ ಮುಂದುವರೆಸಲು ಅವಕಾಶವಿದೆ. ಅದನ್ನು ಬಿಟ್ಟು ಸಮಿತಿ ನೇಮಕ ಎಂದರೆ ಅದು ಪಂಚಾಯತ್ ರಾಜ್ ಕಾಯ್ದೆಗೆ ವಿರುದ್ಧ. ಈ ಬಗ್ಗೆ ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪಕ್ಷ ಕಾನೂನು ಹೋರಾಟ ನಡೆಸಲಿದೆ ಎಂದರು.