ಲಾಕ್‍ಡೌನ್ ಮುಗಿದ ನಂತರ ಪ್ರವಾಸೋದ್ಯಮ  ಉತ್ತೇಜಿಸಲು ‘ನೋಡು ಬಾ ನಮ್ಮೂರ’ ಯೋಜನೆ

ಮೈಸೂರು, ಮೇ 6(ಆರ್‍ಕೆ)- ಕೋವಿಡ್-19 ಲಾಕ್ ಡೌನ್‍ನಿಂದಾಗಿ ನೆಲಕಚ್ಚಿರುವ ಪ್ರವಾ ಸೋದ್ಯಮವನ್ನು ಪುನಶ್ಚೇತನಗೊಳಿ ಸಲು ‘ನೋಡು ಬಾ ನಮ್ಮೂರ’ ಯೋಜನೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಲಾಕ್‍ಡೌನ್ ಮುಕ್ತಾಯಗೊಂಡ ನಂತರ ಸ್ಥಳೀಯ ಪ್ರವಾಸೋದ್ಯಮ ಉತ್ತೇಜಿಸಲು ‘ನೋಡು ಬಾ ನಮ್ಮೂರ’ ವಿನೂತನ ಯೋಜನೆಯನ್ನು ರೂಪಿಸ ಲಾಗುವುದು. ಡೈನಿಂಗ್ ಔಟ್ ವಿತಿನ್ ಸಿಟಿ, ಸಿಂಗಾಪುರ ಮಾದರಿಯಲ್ಲಿ ಲವ್ ಯುವರ್ ಲೋಕಲ್ ಆಂದೋಲನ ವನ್ನೂ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದೊಳಗಿನ ಪ್ರಾದೇಶಿಕವಾರು, ಅಂತರ ಜಿಲ್ಲಾ ಪ್ರವಾಸೋದ್ಯಮಕ್ಕೆ ಉತ್ತೇಜನ, ಅಂತರರಾಜ್ಯ ಪ್ರವಾಸೋ ದ್ಯಮಕ್ಕೆ ಪ್ರವಾಸಿಗರನ್ನು ಸಜ್ಜುಗೊಳಿಸುವುದು, ಸುರಕ್ಷತೆ ಖಾತರಿಪಡಿಸಿಕೊಂಡು ಹಂತ-ಹಂತವಾಗಿ ಅಂತರ ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುವುದು ಎಂದು ಸಿ.ಟಿ.ರವಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಸಿ ಟಾರ್ಗೆಟ್ ಕಸ್ಟಮರ್ ಪ್ರವಾಸಕ್ಕೆ ಉತ್ತೇಜನ ನೀಡಿ ಕನ್ಸೂಮರ್ ಸೆಂಟಿಮೆಂಟ್ ನಲ್ಲಿ ರಾಜ್ಯ ಶೇ.100ರಷ್ಟು ಸುರಕ್ಷತೆ ಮತ್ತು ಸ್ವಚ್ಛತೆ, ಸೇಫ್ ಝೋನ್ ಎಂಬ ಭರವಸೆ ಮೂಡಿಸಲಾಗುವುದು. ಮೂಲಭೂತ ಸೌಕರ್ಯಕ್ಕೆ ಹಣ ಹೂಡಿ ಅಡ್ವೆಂಚರ್ ಸ್ಥಳಗಳಲ್ಲಿ ಮಾರ್ಕೆಟಿಂಗ್ ಮಾಡುವುದು, ವೆಲ್‍ನೆಸ್ ಟೂರಿಸಂ ಅನ್ನು ಪ್ರೊಮೋಟ್ ಮಾಡಲು ಕ್ರಮ ವಹಿಸ ಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಕುಸಿದಿರುವ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್ ರಚಿಸಿದ್ದು, ಸದ್ಯದಲ್ಲೇ ಕೇಂದ್ರ ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಗೆ ಕರ್ನಾಟಕ ರಾಜ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.