ಮೈಸೂರಲ್ಲಿ ಪ್ರವಾಸ ಮುಗಿಸಿ ಶ್ರೀರಂಗಪಟ್ಟಣ ಕಡೆಗೆ ಗೋಲ್ಡನ್ ಚಾರಿಯಟ್ ಪ್ರಯಾಣ

ಮೈಸೂರು,ಮಾ.15(ಆರ್‍ಕೆ)- ‘ಪ್ರೈಡ್ ಆಫ್ ಕರ್ನಾ ಟಕ’ ಪ್ಯಾಕೇಜ್‍ನಂತೆ ಭಾನುವಾರ ತನ್ನ ಮೊದಲ ಪ್ರವಾಸ ಯಾತ್ರೆ ಆರಂಭಿಸಿರುವ ಗೋಲ್ಡನ್ ಚಾರಿಯಟ್ ರೈಲು, ಮೈಸೂರು ನಗರ ವೀಕ್ಷಣೆ ನಂತರ 23 ಮಂದಿ ಪ್ರವಾಸಿಗರೊಂದಿಗೆ ಶ್ರೀರಂಗಪಟ್ಟಣದತ್ತ ಸಾಗಿತು.

ಆರು ರಾತ್ರಿಯೂ ಸೇರಿದಂತೆ ಒಟ್ಟು 7 ದಿನಗಳ ಪ್ರವಾಸ ನಿಮಿತ್ತ ಭಾನುವಾರ ನಂಜನಗೂಡು ರೈಲು ನಿಲ್ದಾಣದಲ್ಲಿ ನಿಂತಿದ್ದ ‘ಲಕ್ಸುರಿ ಆನ್ ವ್ಹೀಲ್’ ಎಂದೇ ಕರೆಯಲ್ಪಡುವ 15 ಐಷಾರಾಮಿ ಬೋಗಿಗಳನ್ನು ಹೊಂದಿರುವ ಗೋಲ್ಡನ್ ಚಾರಿಯಟ್ ರೈಲು, ಇಂದು ಬೆಳಗ್ಗೆ 8.30 ಗಂಟೆಗೆ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣಕ್ಕೆ ಆಗಮಿಸಿತು. ಪ್ರವಾಸ ಕಾರ್ಯಕ್ರಮ ಆಯೋಜಿಸಿರುವ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೋ ರೇಷನ್(Iಖಅಖಿಅ) ಅಧಿಕಾರಿಗಳು, 23 ಪ್ರವಾಸಿಗರನ್ನು ಮೈಸೂರು ಅರಮನೆಗೆ ಐಷಾರಾಮಿ ಬಸ್ಸಿನಲ್ಲಿ ಕರೆ ತಂದು, ಅಂಬಾ ವಿಲಾಸ ಅರಮನೆ, ಕಲ್ಯಾಣ ಮಂಟಪ, ದರ್ಬಾರ್ ಹಾಲ್, ರಾಜರ ನಿವಾಸ, ಅರಮನೆಯ ಪಾರಂಪರಿಕ ವೈಭವ, ಪೇಂಟಿಂಗ್ಸ್‍ಗಳನ್ನು ತೋರಿಸಿ ದರು. ಪ್ರವಾಸಿ ಮಾರ್ಗದರ್ಶಿ ರಮೇಶ ಗೋಲ್ಡನ್ ಚಾರಿಯಟ್ ಪ್ರವಾಸಿಗರಿಗೆ ಅರಮನೆಯ ಹಿನ್ನೆಲೆ, ರಾಜರ ಆಳ್ವಿಕೆ, ರಾಜವಂಶದ ಇತಿಹಾಸ, ಅರಸರು ರಾಜ್ಯಕ್ಕೆ ನೀಡಿದ ಕೊಡುಗೆಗಳ ಕುರಿತಂತೆ ಮಾಹಿತಿ ಒದಗಿಸಿದರು.

ಅರಮನೆ ಆವರಣದಲ್ಲಿ ಕೆಲ ಸಮಯ ಸುತ್ತಾಡಿದ ಪ್ರವಾಸಿಗರು, ಅಲ್ಲಿನ ದೇಗುಲಗಳು, ಸುತ್ತಲಿನ ಕೋಟೆಯ ಪಾರಂಪರಿಕ ವಿನ್ಯಾಸ ಕಂಡು ನಿಬ್ಬೆರಗಾದರು. ನಂತರ ಬಸ್ಸಿನಲ್ಲಿ ಅಶೋಕಪುರಂ ರೈಲು ನಿಲ್ದಾಣಕ್ಕೆ ಬಂದು ಊಟ ಮಾಡಿಕೊಂಡು ಮಧ್ಯಾಹ್ನ 3.30 ಗಂಟೆಗೆ ಗೋಲ್ಡನ್ ಚಾರಿಯಟ್‍ನಲ್ಲಿ ಶ್ರೀರಂಗಪಟ್ಟಣಕ್ಕೆ ತೆರಳಿದರು. ಅಲ್ಲಿನ ಟಿಪ್ಪು ಸುಲ್ತಾನ ಸ್ಮಾರಕಗಳು, ಗೋಲಗುಂಬಸ್, ಕೋಟೆಗೆ ಕರೆದೊಯ್ದ ಆಯೋಜಕರು, ನಂತರ ರಾತ್ರಿ ಹಾಸನ ಜಿಲ್ಲೆ, ಬೇಲೂರಿನತ್ತ ಪ್ರಯಾಣ ಬೆಳೆಸಿದರು.

ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡು, ಚಿಕ್ಕಮಗಳೂರಿನ ಬಾಬಾ ಬುಡನ್‍ಗಿರಿ, ಮಾ. 17 ರಂದು ಹಂಪಿ, ಬಾದಾಮಿ, ಐಹೊಳೆ, ಪಟ್ಟಣದಕಲ್ಲು ಮತ್ತು ಗೋವಾ ಸಂದರ್ಶಿಸಿದ ನಂತರ ಐಷಾರಾಮಿ ರೈಲು ಮಾರ್ಚ್ 20 ರಂದು ಬೆಂಗಳೂರು ತಲುಪಿ ಮೊದಲ ಪ್ಯಾಕೇಜಿನ ಪ್ರವಾಸವನ್ನು ಅಂತ್ಯಗೊಳಿಸಲಿದೆ.

ಮಾರ್ಚ್ 21 ರಿಂದ ‘ಜುವೆಲ್ಸ್ ಆಫ್ ಸೌತ್’ ಪ್ಯಾಕೇಜ್‍ನ ಎರಡನೇ ಪ್ರವಾಸ ಆರಂಭವಾಗಲಿದ್ದು, ಬೆಂಗಳೂರಿಂದ ಹೊರಟು, ಮೈಸೂರು, ಹಂಪಿ, ಮಹಾಬಲಿಪುರಂ, ತಂಜಾವೂರ, ಚೆಟ್ಟಿನಾಡ, ಕೊಚ್ಚಿ, ಕುಮಾರಕೊಂನಲ್ಲಿ ಸಂಚರಿಸಿ 7 ದಿನಗಳ ಪ್ರವಾಸ ಅಂತ್ಯಗೊಳ್ಳಲಿದೆ.