ಒಗ್ಗೂಡಿ ಹೋರಾಟ ನಡೆಸಲು ವೇದಿಕೆ ಸಜ್ಜು

ಮೈಸೂರು,ಸೆ.6(ಪಿಎಂ)- ಪ್ರತ್ಯೇಕ ಹೋರಾಟಕ್ಕೆ ಸೀಮಿತ ಗೊಂಡಿದ್ದ ಎನ್‍ಟಿಎಂ ಶಾಲೆ ಉಳಿಸಿ ಹೋರಾಟ ಮತ್ತು ಶ್ರೀ ನಿರಂಜನ ಮಠ ಅಸ್ಮಿತೆ ಉಳಿಸುವ ಹೋರಾಟ ಇದೀಗ ಒಗ್ಗೂಡಿ ಮುಂದುವರೆಯಲು ವೇದಿಕೆ ಸಜ್ಜಾಗಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಹಾರಾಣಿ ಮಾದರಿ (ಎನ್‍ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ ಮತ್ತು ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿಯ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ಒಕ್ಕೂಟದ ಮುಖಂಡ ಪ.ಮಲ್ಲೇಶ್ ಮಾತನಾಡಿ, ಎರಡೂ ಹೋರಾಟ ಜಂಟಿಯಾಗಿ ಮುಂದುವರೆಯಲಿವೆ. ಒಂದು ಇಂಚು ಸಹ ಜಾಗ ಬಿಟ್ಟುಕೊಡುವುದಿಲ್ಲ ಎಂದು ತೀರ್ಮಾನ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಸೆ.15ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದೇವೆ. ಪ್ರತಿಭಟನಾ ಮೆರವಣಿಗೆಯ ಸಮಯ ಮತ್ತು ಮಾರ್ಗದ ವಿವರಗಳನ್ನು ಶೀಘ್ರವೇ ತಿಳಿಸಲಾಗುವುದು ಎಂದು ಹೇಳಿದರು.
ಎನ್‍ಟಿಎಂ ಶಾಲೆ ರಾಜ್ಯದ ಮೊಟ್ಟ ಮೊದಲ ಬಾಲಕಿಯರ ಶಾಲೆಯಾಗಿದ್ದು, ಇದಕ್ಕೆ 140 ವರ್ಷಗಳ ಇತಿಹಾಸವಿದೆ. ಶಾಲೆಯಲ್ಲಿ 300ರಿಂದ 400 ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಬಗ್ಗೆ ದಾಖಲೆ ಗಳಿವೆ. ಈಗಲೂ 70ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿ ದ್ದಾರೆ. ಇದನ್ನು ಏಕಾಏಕಿ 2012ರಲ್ಲಿ ಇದೇ ಬಿಜೆಪಿ ಸರ್ಕಾರ ರಾಮಕೃಷ್ಣ ಆಶ್ರಮಕ್ಕೆ ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿತು. ಇದರ ವಿರುದ್ಧ ನಿರಂತರ ಹೋರಾಟ ನಡೆಯಿತು. ಬಳಿಕ ಅವರು ಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ಅವರ ಪರವಾಗಿ ತೀರ್ಪು ಕೊಟ್ಟಿದೆ. ಆದಾಗ್ಯೂ ನಾವು ಹೋರಾಟ ಮುಂದುವರೆಸಿದ್ದೇವೆ ಎಂದು ತಿಳಿಸಿದರು.

ಆಶ್ರಮದ ಪರವಾಗಿ ಕೋರ್ಟ್ ತೀರ್ಪು ಇದ್ದರೂ ಶಾಲೆ ಮತ್ತು ನಿರಂಜನ ಮಠವನ್ನು ಬಿಟ್ಟು ಕೊಡುವುದಿಲ್ಲ. ಅಷ್ಟಾಗಿಯೂ ಹಿಂದೆ ಸರ್ಕಾರ ನೀಡಿದ್ದ ಆದೇಶ ಜಾರಿ ಮಾಡಿ ಎಂದಷ್ಟೇ ಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಸಚಿವ ಸಂಪುಟದ ಈ ಹಿಂದಿನ ನಿರ್ಣಯ ಕೈಬಿಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಪ್ರತಿಪಾದಿಸಿದರು.

ಈ ಹಿಂದೆ ನಾವು ಶಾಲೆ ಉಳಿಸಲು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಲ್ಲಿ ಮನವಿ ಸಲ್ಲಿಸಿದ್ದೆವು. ಅವರು ಶಾಲೆ ಉಳಿಸುವ ಭರವಸೆ ನೀಡಿದ್ದರು. ಮೊನ್ನೆ ಇಂದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಸಲ್ಲಿಸಿ ದಾಗ, ಅವರು ಆತ್ಮೀಯತೆಯಿಂದ ನಮ್ಮ ಅಹವಾಲು ಆಲಿಸಿ ದ್ದಾರೆ. ಅಲ್ಲದೆ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ದ್ದಾರೆ. ಇಷ್ಟಾದರೂ ರಾಮಕೃಷ್ಣ ಆಶ್ರಮದವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿ ಮುಖಂಡ ಮತ್ತು ಅಖಿಲ ಭಾರತ ವೀರಶೈವ ಮಹಾ ಸಭಾದ ಕೇಂದ್ರ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್. ಲೋಕೇಶ್ ಮಾತನಾಡಿ, ನಿರಂಜನ ಮಠ ಮತ್ತು ಎನ್‍ಟಿಎಂ ಶಾಲೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ತನ್ನದೇ ಧಾರ್ಮಿಕ ಹಿನ್ನೆಲೆ ಹೊಂದಿರುವ ನಿರಂಜನ ಮಠವನ್ನು ಮತ್ತೊಂದು ಭಿನ್ನ ಧಾರ್ಮಿಕ ನೆಲೆಯ ಸಂಸ್ಥೆಗೆ ಹಸ್ತಾಂತರ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಹಾಗಾಗಿ 2012ರ ಸಚಿವ ಸಂಪುಟದ ತೀರ್ಮಾನದಂತೆ 2013ರಲ್ಲಿ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಮೋಹನ್‍ಕುಮಾರ್‍ಗೌಡ ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದರೂ ಸಮಸ್ಯೆ ಬಗೆಹರಿಸುವ ಕಳಕಳಿ ತೋರುತ್ತಿಲ್ಲ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿನ ಆಗು-ಹೋಗುಗಳನ್ನು ಗಮನಹರಿಸುವುದು ಉಸ್ತುವಾರಿ ಸಚಿವರ ಕರ್ತವ್ಯ ಅಲ್ಲವೇ? ಎಂದು ಪ್ರಶ್ನಿಸಿದರು. ಎರಡೂ ಹೋರಾಟದ ಮುಖಂಡರಾದ ಸ.ರ.ಸುದರ್ಶನ, ಹೊಸಕೋಟೆ ಬಸವರಾಜು, ಟಿ.ಲಿಂಗರಾಜು, ದೂರ ಕೆ.ಶಿವಕುಮಾರ್ ಗೋಷ್ಠಿಯಲ್ಲಿದ್ದರು.