ಕಾಲೇಜು ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ 4800 ಹುದ್ದೆ ಭರ್ತಿಗೆ ಕ್ರಮ: ಜಿಟಿಡಿ

ಬೆಂಗಳೂರು:  ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿ ದಂತೆ 4800 ವಿವಿಧ ಹುದ್ದೆಗಳು ಖಾಲಿ ಇದ್ದು, ಆದ್ಯತೆ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವಿಧಾನ ಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆ ಯಲ್ಲಿ ಡಾ. ಉಮೇಶ್ ಜಿ. ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆ ಗಳು ಸೇರಿದಂತೆ 3800 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇವೆ.

ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳಲ್ಲಿ ಉಸ್ತುವಾರಿ ಪ್ರಾಂಶುಪಾಲರನ್ನು ನೇಮಕ ಮಾಡಲಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ನೇಮಕಗೊಂಡಿರುವ ಉಪನ್ಯಾಸಕರನ್ನು ಹಳೇ ಮೈಸೂರು ಭಾಗಕ್ಕೆ ಡೆಪ್ಟೇಷನ್ ಮೇಲೆ ನೇಮಕ ಮಾಡಿರುವ ಬಗ್ಗೆ ಪರಿಶೀಲನೆ ಮಾಡಿ ತುರ್ತು ಕ್ರಮ ಕೈಗೊಳ್ಳುವುದಾಗಿ ಎಂ. ಶ್ರೀನಿವಾಸ್, ಬಿ.ಸಿ.ಪಾಟೀಲ್ ಕೇಳಿದ ಪ್ರಸ್ತಾವಗಳಿಗೆ ಉತ್ತರಿಸಿ, ನಮ್ಮ ಸರ್ಕಾರ ಯಾವುದೇ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದಾಗಲೀ, ಅನ್ಯ ಸೇವೆ ಮೇಲೆ ನಿಯೋಜನೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಮಂಡ್ಯ ಜಿಲ್ಲೆ ಬಸರಾಳುವಿನ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಪದವಿ ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು 2.43 ಕೋಟಿ ರೂ. ಅನುದಾನದ ಅಗತ್ಯವಿದೆ, ಹಣದ ಲಭ್ಯತೆ ಆಧರಿಸಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸದಸ್ಯ ಅಭಯ್ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮೇ 30ರೊಳಗೆ ಪದವಿ ಕಾಲೇಜುಗಳ ಹಾಗೂ ಜೂ.30ರೊಳಗೆ ಸ್ನಾತಕೋತ್ತರ ಕಾಲೇಜುಗಳ ಫಲಿತಾಂಶ ಪ್ರಕಟಣೆಗೆ ನಿರ್ದೇಶಿಸಲಾಗಿದೆ. ಎಲ್ಲಾ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ದಾಖಲಾತಿ, ಪರೀಕ್ಷಾ ವೇಳಾಪಟ್ಟಿ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಏಕರೂಪತೆ ತರಲು ವೇಳಾ ಪಟ್ಟಿ ನಿಗದಿಪಡಿಸಿ, ಆದೇಶಿಸಲಾಗಿದೆ. ಫಲಿತಾಂಶ ಪ್ರಕಟಣೆ ಮತ್ತು ಅಂಕಪಟ್ಟಿ ವಿತರಣೆಯಲ್ಲಿನ ತೊಂದರೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು, ಇಂಜಿನಿಯರಿಂಗ್ ಸೀಟ್‍ಗಳ ಕೌನ್ಸಿಲಿಂಗ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.