ಮಡಿಕೇರಿ, ಏ.5- ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಧಾರಾಕಾರ ಮಳೆ ಸುರಿಯಿತು. ಗುಡುಗು, ಸಿಡಿಲ ಸಹಿತ ಭಾರಿ ಬಿರುಗಾಳಿಯೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಡಿಕೇರಿ, ಸೋಮವಾರಪೇಟೆ ವ್ಯಾಪ್ತಿ ಯಲ್ಲಿ ಉತ್ತಮ ಮಳೆಯಾಗಿದ್ದು, ಸುಡು ಬಿಸಿಲ ಬೇಗೆಗೆ ತಂಪೆರೆದಂತಾಯಿತು.
ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿ ರುವ ಹಿನ್ನಲೆಯಲ್ಲಿ ದಿಢೀರನೆ ಸುರಿದ ಧಾರಾಕಾರ ಮಳೆಯಿಂದ ಜನರಿಗೆ ಸಮಸ್ಯೆಯಾಗಲಿಲ್ಲ. ಕರ್ತವ್ಯನಿರತ ಸಂಚಾರಿ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಮಳೆಯಿಂದ ರಕ್ಷಣೆ ಪಡೆಯಲು ಮುಚ್ಚಿದ್ದ ಅಂಗಡಿ ಮುಂಗಟ್ಟು ಗಳ ಆಶ್ರಯ ಪಡೆದದ್ದು ಕಂಡು ಬಂತು.
ಇನ್ನು ಮಡಿಕೇರಿ ನಗರದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಒಂದು ಗಂಟೆ ಅವಧಿಯಲ್ಲಿ ಒಂದು ಇಂಚಿಗೂ ಅಧಿಕ ಮಳೆ ಸುರಿದ ಬಗ್ಗೆ ಅಂದಾಜಿಸಲಾಗಿದೆ. ಅದರೊಂದಿಗೆ ಮಡಿಕೇರಿ, ಗಾಳಿಬೀಡು, ವಣಚಲು, ಸಂಪಾಜೆ, ಕಲ್ಲುಗುಂಡಿ, ಮಕ್ಕಂದೂರುಗಳಲ್ಲಿ ಆಲಿಕಲ್ಲುಗಳು ಕೂಡ ಬಿದ್ದಿದೆ. ಬಿಸಿಲ ಬೇಗೆಯಿಂದ ಎಲ್ಲೆಡೆ ಸೆಕೆಯ ವಾತಾವರಣ ಕೂಡ ಕಂಡು ಬಂದಿದ್ದು, ಸೊಳ್ಳೆಯ ಕಾಟವೂ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ಸುರಿದ ಮಳೆ ತಂಪು ಹವಾ ಮಾನ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗು ತ್ತಿದೆ. ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಏ.5ರಂದು ಸಾಧಾರಣದಿಂದ ಅಧಿಕ ಮಳೆ ಸುರಿಯುವ ಬಗ್ಗೆ ಗೋಣಿ ಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗ ತಜ್ಞರು ಮಾಹಿತಿಯನ್ನೂ ನೀಡಿದ್ದರು.
ರಸ್ತೆಗೆ ಬಿದ್ದ ಮರ: ಕಾಟಗೇರಿ, ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಭಾರೀ ಪ್ರಮಾಣದ ಮಳೆ ಸುರಿದ ಹಿನ್ನಲೆಯಲ್ಲಿ ಜೋಡುಪಾಲ ಮುಖ್ಯರಸ್ತೆ ಯಲ್ಲಿ ಮರ ಬಿದ್ದು ರಸ್ತೆ ಸಂಪರ್ಕ ಕೆಲಕಾಲ ಅಡ್ಡಿಯಾಯಿತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದ ಹಿನ್ನಲೆಯಲ್ಲಿ ವಿದ್ಯುತ್ ವ್ಯವಸ್ಥೆ ಕೂಡ ವ್ಯತ್ಯಯವಾದ ಬಗ್ಗೆ ವರದಿ ಯಾಗಿದೆ. ತಕ್ಷಣವೇ ಅತ್ತ ತೆರಳಿದ ಚೆಸ್ಕಾಂ ಸಿಬ್ಬಂದಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿದರು.
ಲಾಕ್‍ಡೌನ್ ಹಿನ್ನಲೆಯಲ್ಲಿ ಮಡಿಕೇರಿ- ಸುಳ್ಯ ಸಂಪರ್ಕಿಸುವ ರಸ್ತೆಯನ್ನು ಸಂಪಾಜೆ ಚೆಕ್‍ಪೋಸ್ಟ್ ಬಳಿ ಬಂದ್ ಮಾಡಿದ್ದು, ಕೇವಲ ತುರ್ತು ಸೇವೆಗಳಿಗೆ ಮಾತ್ರವೇ ಚೆಕ್ ಪೋಸ್ಟ ಅನ್ನು ತೆರವು ಮಾಡಲಾಗುತ್ತಿದೆ. ಈ ರಸ್ತೆಯಲ್ಲಿ ಮಳೆಯ ಸಂದರ್ಭ ಆಗಮಿ ಸಿದ್ದ ಭಾರತ್ ಪೆಟ್ರೋಲಿಯಂ ಕಂಪೆನಿಯ ಅಡುಗೆ ಅನಿಲ ತುಂಬಿದ ಲಾರಿ ಕೂಡ ರಸ್ತೆ ಮಧ್ಯೆ ಸಿಲುಕಿಕೊಂಡಿತ್ತು. ಮರವನ್ನು ತೆರವು ಮಾಡಿದ ಬಳಿಕ ಲಾರಿ ಮಡಿಕೇರಿ ಮಾರ್ಗವಾಗಿ ಮೈಸೂರು ಕಡೆ ಪ್ರಯಾಣ ಬೆಳೆಸಿದೆ. ಇನ್ನು ಹೆದ್ದಾರಿ ಉದ್ದಕ್ಕೂ ಮರದ ಸಣ್ಣ ಕೊಂಬೆಗಳು, ಒಣಗಿದ ಎಲೆಗಳು ಬಿದ್ದದ್ದು ಕಂಡು ಬಂತಲ್ಲದೇ, ಬಿರು ಗಾಳಿಯ ತೀವ್ರತೆಯನ್ನು ಸಾಕ್ಷೀಕರಿಸಿದವು.