ವಾಣಿಜ್ಯ ಉಪಗ್ರಹ ಪಿಎಸ್‍ಎಲ್‍ವಿ 4 ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೆಗ್ಗಳಿಕೆಗೆ ಭಾನುವಾರ ಮತ್ತೊಂದು ಗರಿ ಮೂಡಿದೆ.

ಇದೇ ಮೊದಲ ಬಾರಿಗೆ ಇಸ್ರೋ ಸಂಪೂರ್ಣ ವಾಣಿಜ್ಯ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಬ್ರಿಟನ್‍ನ ‘ನೋವಾ ಎಸ್‍ಎಆರ್’ ಮತ್ತು ‘ಎಸ್1-4′ ಭೂ ಸರ್ವೇಕ್ಷಣೆ ಉಪಗ್ರಹಗಳನ್ನು ಹೊತ್ತ ‘ಪಿಎಸ್‍ಎಲ್‍ವಿ-ಸಿ42′ ರಾಕೆಟ್ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ 10.08ಕ್ಕೆ ಸರಿಯಾಗಿ ನಭಕ್ಕೆ ಚಿಮ್ಮಿತು. ಇಸ್ರೋ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

200 ಕೋಟಿ ಆದಾಯ: ಸಂಪೂರ್ಣ ವಾಣಿಜ್ಯ ಉದ್ದೇಶದ ಉಡಾವಣೆಯಾಗಿದ್ದ ಹಿನ್ನೆಲೆಯಲ್ಲಿ, ಭಾರತದ ಯಾವೊಂದು ಉಪಗ್ರಹವನ್ನೂ ಇದು ಒಳಗೊಂಡಿರಲಿಲ್ಲ. ಉಪಗ್ರಹಗಳ ಉಡಾವಣೆಗಾಗಿ ಬ್ರಿಟನ್‍ನ ಸಂಸ್ಥೆಯೊಂದು ಇಸ್ರೋದ ‘ಪಿಎಸ್‍ಎಲ್‍ವಿ-ಸಿ42’ ರಾಕೆಟ್ ಅನ್ನು ಬಾಡಿಗೆಗೆ ಪಡೆದಿತ್ತು. ಇಸ್ರೋನ ವಾಣಿಜ್ಯ ಅಂಗವಾದ ‘ಅಂತರಿಕ್ಷ್ ಕಾರ್ಪೋರೇಷನ್’ ಮೂಲಕ ಇದರ ಗುತ್ತಿಗೆ ಪಡೆಯಲಾಗಿತ್ತು. ಈ ಉಡಾವಣೆಯೊಂದಿಗೆ ಇದರಿಂದ ಇಸ್ರೋಗೆ 200 ಕೋಟಿ ರೂ. ಆದಾಯ ದೊರೆಯಲಿದೆ.

ಬ್ರಿಟಿಷ್ ಸಂಸ್ಥೆಯ ಇಚ್ಛೆಯಂತೆ ರಾತ್ರಿ ವೇಳೆ ರಾಕೆಟ್ ಉಡ್ಡಯನಕ್ಕೆ ಇಸ್ರೊ ವ್ಯವಸ್ಥೆ ಮಾಡಿತ್ತು. ನಿರ್ದಿಷ್ಟ ಸಮಯದಲ್ಲಿ ಉಡಾವಣೆ ಮಾಡಿದರೆ ಮಾತ್ರ ಉಪಗ್ರಹಗಳಿಗೆ ಅಗತ್ಯವಾದ ನಿರ್ದಿಷ್ಟ ಕಕ್ಷೆಯನ್ನು ಪಡೆಯಲು ಸಾಧ್ಯವಾಗುವ ಹಿನ್ನೆಲೆಯಲ್ಲಿ, ಬ್ರಿಟನ್ ಸಂಸ್ಥೆಯ ಇಚ್ಛೆಯಂತೆ ರಾತ್ರಿ 10.08ಕ್ಕೆ ಉಡಾವಣೆ ಮಾಡಲಾಯಿತು. ಇಸ್ರೋ ಇದುವರೆಗೂ ಮೂರು ಬಾರಿ ರಾತ್ರಿ ವೇಳೆ ಉಪಗ್ರಹ ಉಡಾವಣೆ ಮಾಡಿದ್ದು, ಮೂರೂ ಯಶಸ್ವಿಯಾಗಿವೆ.