ಹನೂರು ಬಳಿ ಮಹಾರಾಷ್ಟ್ರದ ಆದಿವಾಸಿಗಳ ಭೇಟಿ ಮಾಡಿದ ಸಚಿವ ಸುರೇಶ್‍ಕುಮಾರ್

ಕೊಳ್ಳೇಗಾಲ, ಏ.1- ಮಹಾರಾಷ್ಟ್ರದ ರಾಯಘಡ್ ಪ್ರದೇಶದಿಂದ ವಲಸೆ ಬಂದು ಹನೂರು ಕ್ಷೇತ್ರ ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಹೊರವಲಯದಲ್ಲಿ ವಾಸ್ತವ್ಯ ಹೂಡಿರುವ ಆದಿವಾಸಿ ಕುಟುಂಬಗಳನ್ನು ಜಿಲ್ಲಾಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಬುಧವಾರ ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿದರು.

ನಂತರ ಈ ಕುರಿತು ಕೊಳ್ಳೇಗಾಲದಲ್ಲಿ ಸುದ್ದಿಗಾರರಿಗೆ ವಿವರ ನೀಡಿದ ಅವರು, ಮಹಾ ರಾಷ್ಟ್ರದ ರಾಯಘಡ್ ಪ್ರದೇಶದಿಂದ ಗುತ್ತಿಗೆ ದಾರರು ಅವರನ್ನು ಜಾಲಿ ಮರದಿಂದ ಇದ್ದಿಲು ತಯಾರಿಸುವ ಕೆಲಸಕ್ಕೆ ಕರೆತಂದಿದ್ದಾರೆ, ಅವರು ಜಿಲ್ಲೆಯ ವಿವಿಧ 5 ಕಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಆಹಾರ ಪೂರೈಕೆಗೆ ಕ್ರಮವಹಿಸಲಾಗಿದೆ. ಅವರು ಕೆಲಸ ಮಾಡುವ ವಾತಾವರಣ ಸಹಾ ಗಮನಿಸಲಾಗಿದೆ. ಇವೆಲ್ಲದರ ಕುರಿತು ಲಾಕ್ ಡೌನ್ ಮುಗಿದ ಮೇಲೆ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದು ವಿವರಿಸಲಾಗುವುದು, ಇಲ್ಲಿರುವ ಆದಿವಾಸಿಗಳ ಆರೋಗ್ಯ ತಪಾಸಣೆಗೆ ಸಹಾ ಕೈಗೊಳ್ಳಲಾಗಿದೆ,

ಗೌಡಳ್ಳಿಯಲ್ಲಿರುವ ಆದಿವಾಸಿಗಳ ಪೈಕಿ ಮಹಿಳೆ ಯೊಬ್ಬರು ಗರ್ಭಿಣಿಯಾಗಿದ್ದು, ಅಗತ್ಯ ಕ್ರಮಕ್ಕೂ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 248ಮಂದಿ ವಲಸೆ ಕಾರ್ಮಿಕರಿದ್ದಾರೆ. ಅವರಿಗೆ ಅಗತ್ಯ ಊಟ ಹಾಗೂ ವಸತಿ ಸೌಕರ್ಯಕ್ಕೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 52ಮಂದಿ ಸಾಮಾನ್ಯ ಹಾಗೂ 3ಮಂದಿಯನ್ನು ಹೊಂ ಕ್ವಾರಟೈನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ. ಜಿಲ್ಲೆ ಕೊರೊನಾ ಮುಕ್ತವಾಗಿದೆ, ದೇಶಾದ್ಯಂತ ವೈದ್ಯರು ಹಾಗೂ ಆರೋಗ್ಯ ಇಲಾಖೆ ದೇವರ ರೂಪದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಕೊರೊನಾ ವೈರಸ್ ಎಫೆಕ್ಟ್ ಪ್ರಾರಂಭವಾದ ಬಳಿಕ ಮೂರು ಬಾರಿ ಜಿಲ್ಲೆಗೆ ಭೇಟಿ ನೀಡಿರುವೆ. ರಸಗೊಬ್ಬರ ಖರೀದಿಗೆ ಬೆಳಗ್ಗೆ 10ರಂದ 2ಗಂಟೆತನಕ ರೈತರುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.