ದಿನ್ನಳ್ಳಿಯಲ್ಲಿ ಕೋಳಿಗಳ ಅನುಮಾನಾಸ್ಪದ ಸಾವು

ಚಾಮರಾಜನಗರ, ಏ.19- ಹನೂರು ತಾಲೂಕು ರಾಮಾಪುರ ಹೋಬಳಿಯ ದಿನ್ನಳ್ಳಿ ಗ್ರಾಮದಲ್ಲಿ ಸ್ಥಳೀಯ ಕೋಳಿಗಳು, ಮಾಂಸದ ಕೋಳಿಗಳು ಹಾಗೂ ಕಾಗೆಗಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳೀಯ ಪಶು ವೈದ್ಯರು ಹಾಗೂ ತಾಲೂಕು ಸಹಾಯಕ ನಿರ್ದೇಶಕ ರೊಡನೆ ಖುದ್ದು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಸಿ.ವೀರಭಧ್ರಯ್ಯ ತಿಳಿಸಿದ್ದಾರೆ.

ಕೋವಿಡ್-19ರ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ಯಾನಿಟೈಸರ್ ಹಾಗೂ ಹೈಪೋಕ್ಲೋ ರೈಡ್‍ನ್ನು ಸಿಂಪಡಿಸಿರುವುದರಿಂದ ಅಥವಾ ಯಾವುದಾದರೂ ವಿಷ ಪದಾರ್ಥದ ಮೇವನ್ನು ತಿಂದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಮೃತಪಟ್ಟ ಕೋಳಿ ಮತ್ತು ಕಾಗೆಯ ಕಳೇಬರ ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ದಿನ್ನಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಕೋಳಿಗಳಿಗೆ ಲಸಿಕೆ ಮತ್ತು ಅಗತ್ಯ ಔಷಧೋಪಚಾರ ಮಾಡಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.

ಕೋಳಿಗಳು, ಪಕ್ಷಿಗಳು ಅನುಮಾನಾಸ್ಪದವಾಗಿ ಮೃತಪಟ್ಟಲ್ಲಿ ಕೂಡಲೇ ಸ್ಥಳೀಯ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಪಶುವೈದ್ಯರ ನಿರ್ದೇಶನದಂತೆ ಸೂಕ್ತ ವಿಲೇವಾರಿ ಮಾಡಬೇಕು. ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಸಿ. ವೀರಭದ್ರಯ್ಯ ಮನವಿ ಮಾಡಿದ್ದಾರೆ