ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಬೇರೆ ಹುದ್ದೆ ಆಯ್ಕೆಗೆ ಅರ್ಜಿ ಸಲ್ಲಿಸಲು ಇನ್ನು ಎನ್‍ಒಸಿ ಬೇಕಿಲ್ಲ

ಬೆಂಗಳೂರು, ಸೆ. 9-ಈಗಾಗಲೇ ಸರ್ಕಾರಿ ಹುದ್ದೆ ಯಲ್ಲಿದ್ದು, ಮತ್ತೊಂದು ಸರ್ಕಾರಿ ಹುದ್ದೆ ಆಯ್ಕೆ ಗಾಗಿ ಅರ್ಜಿ ಸಲ್ಲಿಸುವ ಮುನ್ನ ಎನ್‍ಒಸಿ ಪಡೆಯುವ ಹಳೆ ನಿಯಮಕ್ಕೆ ವಿನಾಯಿತಿ ಕಲ್ಪಿಸಿ, ಸರಕಾರ ನೌಕರರ ಪಾಲಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಹುದ್ದೆಯಲ್ಲಿದ್ದು, ಮತ್ತೊಂದು ಸರ್ಕಾರಿ ಹುದ್ದೆಗಾಗಿ ಅರ್ಜಿ ಸಲ್ಲಿಸಲು ತಾವು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ನಿರಾಕರ್ಷೇಪಣಾ ಪತ್ರ(ಎನ್‍ಒಸಿ) ಪಡೆಯುವುದು ಈ ಮೊದಲು ಕಡ್ಡಾಯವಾಗಿತ್ತು. ಇದೀಗ ಈ ನಿಯಮಕ್ಕೆ ತಿದ್ದುಪಡಿ ತಂದಿದ್ದು ನೌಕರರು ಬೇರೊಂದು ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸಿ, ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿ ಆಯ್ಕೆಗೊಂಡ ನಂತರವೂ ಹಿಂದಿನ ನೌಕರಿ ಇಲಾಖೆ/ಸಚಿವಾ ಲಯದ ಮುಖ್ಯಸ್ಥರಿಂದ ಎನ್‍ಒಸಿ ಪಡೆಯಲು ಅವಕಾಶ ನೀಡಿ, ಹೊಸ ನಿಯಮ ಜಾರಿಗೊಳಿಸಲು ಕರಡು ಅಧಿಸೂಚನೆ ಪ್ರಕಟಿಸಿದೆ. ನೌಕರರು ಅರ್ಜಿ ನೀಡಿದ 30 ದಿನಗಳ ಒಳಗಾಗಿ ನಿರಾಪೇಕ್ಷಣಾ ಪತ್ರ ನೀಡಬೇಕು ಎಂದು ತಿದ್ದುಪಡಿ ನಿಯಮಗಳಲ್ಲಿ ತಿಳಿಸಿದೆ. ಇದೇ ವೇಳೆ ಯಾವುದೇ ನೌಕರ ಅಶಿಸ್ತು ಕ್ರಮಗಳನ್ನು ಎದುರಿಸುತ್ತಿದ್ದಲ್ಲಿ, ಕ್ರಿಮಿನಲ್ ವಿಚಾರಣೆಗೆ ಒಳಗಾಗಿದ್ದಲ್ಲಿ, ಇಲಾಖೆಯ ವಿಚಾರಣೆಗಳನ್ನು ಎದುರಿಸುತ್ತಿದ್ದಲ್ಲಿ, ಸಾರ್ವಜನಿಕ ಹಿತಾಸಕ್ತಿಯಿಂದ ಅಂತಹ ಅಭ್ಯರ್ಥಿಗಳಿಗೆ ಎನ್‍ಒಸಿ ನೀಡಬಾರದು ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.