ಮೈಸೂರು, ಆ.17(ಆರ್‍ಕೆ)- ಬೆಂಗಳೂರಿನ ಕೆಜಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರದ ಆದ್ಯ ಜವಾಬ್ದಾರಿ. ಅದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ ಎಂದು ಎನ್‍ಆರ್ ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ತಿಳಿಸಿದ್ದಾರೆ.
ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರ ಕೆಲಸ. ಆದರೆ ಎಸ್‍ಡಿಪಿಐ ಅಥವಾ ಮತ್ತೊಂದು ಸಂಘ ಟನೆ ನಿಷೇಧಿಸಬೇಕು ಎಂಬುದನ್ನು ಬಿಂಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಒಂದು ವೇಳೆ ನಿಷೇಧಿಸಬೇಕೆಂದರೆ ಕಾನೂನು ಪ್ರಕಾರ ಕ್ರಮ ವಹಿಸಬೇಕು. ಅದು ಬಿಟ್ಟು ಸುಮ್ಮನೆ ಅಲ್ಲಿ ಇಲ್ಲಿ ಮಾತನಾಡಿಕೊಂಡು ಓಡಾಡುವುದು ಸರಿಯಲ್ಲ ಎಂದರು.
ನಮ್ಮದು ವಿರೋಧ ಪಕ್ಷ. ಸಿದ್ಧಾಂತಗಳ ಆಧಾರದ ಮೇಲೆ ರಾಜಕೀಯ ಮಾಡ ಬೇಕಾಗುತ್ತದೆ. ಆದರೆ ಗಲಭೆ ಪ್ರಕರಣವನ್ನು ಯಾರೂ ಸಹಿಸಲಾಗುವುದಿಲ್ಲ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ನನ್ನ ಮೇಲಿನ ಹಲ್ಲೆಗೂ ಎಸ್‍ಡಿಪಿಐಗೂ ಸಂಬಂಧವಿದೆ ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ಪ್ರಕರಣ ಕುರಿತಂತೆ ಬಂಧಿಸಲಾಗಿದ್ದ 8 ಮಂದಿ ಪೈಕಿ ಐವರು ಜಾಮೀನು ಮೇಲೆ ಹೊರಬಂದಿದ್ದಾರೆ. ಸತ್ಯಾಂಶ ಹೊರ ಬರುವವರೆಗೂ ಈ ಬಗ್ಗೆ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತನ್ವೀರ್ ಸೇಠ್ ನುಡಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರು, ಪ್ರಕರಣ ಸಂಬಂಧ ಎಸ್‍ಡಿಪಿಐ ನಿಷೇಧ ಮಾಡಬೇಕೆಂದು ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗರೆಡ್ಡಿ ಅವರೇ ಒತ್ತಾಯ ಮಾಡುತ್ತಿದ್ದಾರೆ. ಅದೇ ರೀತಿ ಬೇರೆ ಬೇರೆ ಪಕ್ಷದ ನಾಯಕರಿಂದಲೂ ಆಗ್ರಹ ಕೇಳಿ ಬರುತ್ತಿದೆ. ಈ ಕುರಿತು ಆಗಸ್ಟ್ 20ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗುವುದು. ಕೇವಲ ಎಸ್‍ಡಿಪಿಐ ನಿಷೇಧ ಅಷ್ಟೇ ಅಲ್ಲ. ಗಲಭೆಕೋರ ರಿಂದಲೇ ನಷ್ಟ ವಸೂಲಿ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.