ತೆರಕಣಾಂಬಿ ತಾಪಂ ಉಪ ಚುನಾವಣೆ: ಶೇ.73ರಷ್ಟು ಮತದಾನ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಉಪ ಚುನಾವಣೆಯಲ್ಲಿ ಶೇ.73ರಷ್ಟು ಮತದಾನವಾಗಿದೆ.
ತಾಲೂಕು ಪಂಚಾಯಿತಿ ಸದಸ್ಯ ಮಹೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಬಿಜೆಪಿ ಅಭ್ಯರ್ಥಿ ಮಹೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾರಾಯಣನಾಯ್ಕರ ನಡುವೆ ನೇರ ಸ್ಪರ್ಧೆ ಏರ್ಪಟಿದ್ದು, ಒಟ್ಟು 7,980 ಮತದಾರರ ಪೈಕಿ 5,856 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ತೆರಕಣಾಂಬಿ ತಾಪಂ ಕ್ಷೇತ್ರ ವ್ಯಾಪ್ತಿಯ ಲಕ್ಕೂರು, ಗುರುವಿನಪುರ, ತೆರಕಣಾಂಬಿ ಹಾಗೂ ತೆರಕಣಾಂಬಿ ಹುಂಡಿ ಗ್ರಾಮಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಯುವಕ, ಯುವತಿಯರು, ವೃದ್ಧರು ಹಾಗೂ ವಿಕಲಚೇತನರು ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ತೆರಕಣಾಂಬಿ ಗ್ರಾಮದ ಶತಾಯಿಷಿ ಶಿವಮ್ಮ ತಮ್ಮ ಮೊಮ್ಮಕ್ಕಳಾದ ರಾಜು ಹಾಗೂ ಉಮಾ ಅವರ ನೆರವಿನಿಂದ ಮತಗಟ್ಟೆಗೆ ಬಂದು ಮತಚಲಾಯಿಸಿದರು.

ಈ ಉಪ ಚುನಾವಣೆಯನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಕಾಂಗ್ರೆಸ್ ಯುವ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.